ಭೋಪಾಲ್: ತಾನು ಸಾಕಿದ ಎಮ್ಮೆ ಸರಿಯಾಗಿ ಹಾಲು ಕೊಡುತ್ತಿಲ್ಲ ಎಂದು ರೈತನೋರ್ವ ಪೊಲೀಸ್ ಠಾಣೆಗೆ ತೆರಳಿ ಆ ಎಮ್ಮೆಯ ವಿರುದ್ಧವೇ ದೂರು ಕೊಟ್ಟಿರುವ ಘಟನೆ ಮಧ್ಯಪ್ರದೇಶದ ಭಿಂದ್ ಜಿಲ್ಲೆಯಲ್ಲಿ ನಡೆದಿದೆ.
ಬಾಬುಲಾಲ್ ಜಾತವ್ (45) ದೂರು ನೀಡಿದ ರೈತ ಎಂದು ಗುರುತಿಸಲಾಗಿದೆ.
ಆತ ಎಮ್ಮೆಯೊಂದಿಗೆ ಪೊಲೀಸ್ ಠಾಣೆಗೆ ತೆರಳಿ, ಎಮ್ಮೆಹಾಲು ಕೊಡುತ್ತಿಲ್ಲ. ಇದರ ಮೇಲೆ ವಾಮಾಚಾರ ಮಾಡಿರಬಹುದು. ಅದರ ಪರಿಣಾಮವಾಗಿ ಅದು ಹಾಲು ನೀಡುತ್ತಿಲ್ಲ ಎಂದು ದೂರಿದ್ದಾನೆ.
ಪೊಲೀಸರ ಬಳಿ ಎಮ್ಮೆಯ ಜೊತೆಗೆ ದೂರು ನೀಡುತ್ತಿರುವುದು ಹಾಗೂ ಪೊಲೀಸರ ಸಹಾಯ ಕೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೂರು ನೀಡಲು ಬಂದಿದ್ದ ರೈತನಿಗೆ ಹಳ್ಳಿಯ ಪಶು ವೈದ್ಯರ ಬಳಿ ತೆರಳಲು ಹೇಳಿದ್ದೆವು ಎಂದು ಪೊಲೀಸರು ತಿಳಿಸಿದ್ದಾರೆ. ಆ ಬಳಿಕ ರೈತ ತನ್ನ ಎಮ್ಮೆಯ ಜೊತೆಗೆ ಠಾಣೆಗೆ ಬಂದು, ಎಮ್ಮೆಯು ಹಾಲು ಕೊಡಲು ಅನುಕೂಲ ಮಾಡಿಕೊಟ್ಟ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾನೆ.