ಮಹರಾಷ್ಟ್ರ : ಹಿಂದುತ್ವದ ವಿಚಾರವಾಗಿ ಶಿವಸೇನೆ ಮತ್ತು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಡುವಿನ ಕಾದಾಟ ಮುಂದುವರಿದಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಹಿಂದುತ್ವ ಸಿದ್ಧಾಂತವಾದಿ ವೀರ ದಾಮೋದರ ಸಾವರ್ಕರ್ ಗೆ ಇನ್ನೂ ಯಾಕೆ ಭಾರತ ರತ್ನ ನೀಡಿಲ್ಲ ಎಂದು ಶಿವಸೇನೆಯ ಮುಖ್ಯ ವಕ್ತಾರ ಸಂಜಯ್ ರಾವತ್ ಕುಟುಕಿದ್ದಾರೆ.
“ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಯಾಕಾಗಿ ದಸರಾ ರ್ಯಾಲಿಯಲ್ಲಿ ವೀರ ಸಾವರ್ಕರ್ ರನ್ನು ಪ್ರಶಂಸಿಸುವ ಒಂದೇ ಒಂದು ಪದವನ್ನು ಆಡಿಲ್ಲ. ಬಹುಶ: ಪದೇ ಪದೇ ವೀರಸಾವರ್ಕರ್ ರನ್ನು ಅವಮಾನಿಸುವ ಹೇಳಿಕೆಗಳನ್ನು ನೀಡುವ ಅವರ ಹೊಸ ಸ್ನೇಹಿತನ ಕುರಿತು ಭಯವಿರಬಹುದು” ಎಂದು ಬಿಜೆಪಿ ವಕ್ತಾರ ರಾಮ್ ಕದಮ್ ರವಿವಾರದಂದು ಟ್ವೀಟ್ ಮಾಡಿದ್ದರು.
`ಸಾವರ್ಕರ್ ಬಗ್ಗೆ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಅವರ ವಿರುದ್ಧ ಹೇಳಿಕೆಗಳು ಬಂದಾಗಲೆಲ್ಲಾ ನಾವು ಅವರ ಪರವಹಿಸಿ ಮಾತನಾಡಿದ್ದೇವೆ. ನಮ್ಮ ಭಾವನಾತ್ಮಕ ಸಂಬಂಧ ಅವರೊಂದಿಗೆ ಇದೆ. ಕೇಂದ್ರದಲ್ಲಿ ಆರುವರ್ಷದಿಂದ ಆಡಳಿತ ಚುಕ್ಕಾಣಿ ಹಿಡಿದಿರುವವರೇಕೆ ಸಾವರ್ಕರ್ ಗೆ ಭಾರತ ರತ್ನ ವನ್ನು ನೀಡಲಿಲ್ಲ ಎಂದು ಉತ್ತರಿಸಬೇಕಿದೆ’ ಎಂದು ರಾವತ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.