ಲಕ್ನೋ: ಪತ್ರಕರ್ತರು, ವಕೀಲರ ವಿರುದ್ಧ ತ್ರಿಪುರಾ ಪೊಲೀಸರು ಯುಎಪಿಎಯಡಿ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಗೆ ಗುರುವಾರ ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ.
ಈ ಪ್ರಕರಣವನ್ನು ತುರ್ತು ಪಟ್ಟಿಗೆ ಸೇರಿಸಬೇಕೆಂದು ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್, ಸುಪ್ರೀಂ ಕೋರ್ಟ್ ನ ಸಿಜೆಐ ಎನ್.ವಿ. ರಮಣ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠಕ್ಕೆ ಅರ್ಜಿ ಸಲ್ಲಿಸಿದರು.
ತ್ರಿಪುರಾ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸತ್ಯಶೋಧನಾ ವರದಿಗೆ ತೆರಳಿದ ವಕೀಲರ ತಂಡ ಮತ್ತು ಹಿಂಸಾಚಾರವನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳ ಪೋಸ್ಟ್ ಹಾಕಿದವರ ವಿರುದ್ಧ ಯುಎಪಿಎ ಮತ್ತು ಐಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ನೋಟಿಸ್ ನೀಡಲಾಗಿತ್ತು ಎಂದು ಪ್ರಶಾಂತ್ ಭೂಷಣ್ ನ್ಯಾಯಾಲಯದ ಗಮನಕ್ಕೆ ತಂದರು.
ಯುಎಪಿಎ ಮತ್ತು ಐಪಿಸಿ ಕಾನೂನು ನಿಬಂಧನೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಸಿಜೆಐ ಈ ಅರ್ಜಿಯನ್ನು ಪರಿಶೀಲನೆ ನಡೆಸಿ ವಿಚಾರಣೆಯ ದಿನಾಂಕವನ್ನು ಘೋಷಿಸುವುದಾಗಿ ತಿಳಿಸಿದರು.
ತ್ರಿಪುರಾ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಶ್ಚಿಮ ಅಗರ್ತಲಾ ಪೊಲೀಸರು ದೆಹಲಿ ಮೂಲದ ಮಾನವ ಹಕ್ಕುಗಳ ಪರ ವಕೀಲರಾದ ಮುಖೇಶ್ ಮತ್ತು NCHRO, ಇದರ ಅಧ್ಯಕ್ಷ ಅನ್ಸಾರ್ ಇಂದೋರಿ ಗೆ ನೋಟಿಸ್ ನೀಡಿದ್ದರು.
ಮಾತ್ರವಲ್ಲ ತ್ರಿಪುರಾ ಬರ್ನಿಂಗ್ ಎಂದು ಟ್ವೀಟ್ ಮಾಡಿದ್ದಕ್ಕಾಗಿ ಪತ್ರಕರ್ತ ಶ್ಯಾಮ್ ಮೀರಾ ಸಿಂಗ್ ಅವರಿಗೆ ಪೊಲೀಸರು ಯುಎಪಿಎ ಅಡಿಯಲ್ಲಿ ನೋಟಿಸ್ ನೀಡಿದ್ದಾರೆ.