ಬಿಟ್ ಕಾಯಿನ್ ಕುರಿತು ಚರ್ಚೆಯೇ ಆಗಿಲ್ಲ: ಪ್ರಧಾನಿ ಮೋದಿ ಭೇಟಿ ಬಳಿಕ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

Prasthutha|

► ಡಿಸೆಂಬರ್ ವೇಳೆ ಪ್ರಧಾನಿ ಕರ್ನಾಟಕ ಪ್ರವಾಸ

- Advertisement -

ನವದೆಹಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಹಲವು ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆದಿದ್ದು, ಪ್ರಧಾನಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಕಳೆದ 100 ದಿನಗಳಲ್ಲಿ ನಮ್ಮ ಸರಕಾರ ನಡೆಸಿರುವ ಆಡಳಿತ, ಸುಧಾರಣಾ ಕ್ರಮಗಳು, ರೂಪಿಸಿರುವ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ಸಂತೃಪ್ತಿ, ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯದ ಜನತೆಯ ವಿಶ್ವಾಸ ಪಡೆಯಲು ಮತ್ತು ನೀವು ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡಿ ಎಂದು ಪ್ರಧಾನ ಮಂತ್ರಿಗಳು ಸಲಹೆ ನೀಡಿದ್ದಾರೆ ಎಂದು ಹೇಳಿದರು.

- Advertisement -


ಅಲ್ಲದೇ ರಾಜ್ಯದಲ್ಲಿ ಸುದ್ದಿಯಾಗಿರುವ ಬಿಟ್ ಕಾಯಿನ್ ಬಗ್ಗೆ ಚರ್ಚೆಯೇ ಆಗಿಲ್ಲ. ಮಾತುಕತೆ ಮಧ್ಯೆ ಬಿಟ್ ಕಾಯಿನ್ ದಂಧೆಯನ್ನು ಪ್ರಸ್ತಾಪಿಸಲು ನಾನಾಗಿಯೇ ಪ್ರಯತ್ನಪಟ್ಟರೂ, ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ದಿಟ್ಟತನದಿಂದ ನಿಮ್ಮ ಕೆಲಸವನ್ನು ಮಾಡಿಕೊಂಡು ಹೋಗಿ ಎಂದು ಪ್ರಧಾನಿ ಸಲಹೆ ನೀಡಿದ್ದಾರೆ ಎಂದರು.


ಡಿಸೆಂಬರ್ ನಲ್ಲಿ ಪ್ರಧಾನಿ ಕರ್ನಾಟಕಕ್ಕೆ :
ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಡಿಸೆಂಬರ್ ತಿಂಗಳಲ್ಲಿ ಪ್ರಧಾನ ಮಂತ್ರಿಗಳು ಬೆಂಗಳೂರಿಗೆ ಆಗಮಿಸುತ್ತೇನೆ ಎಂದಿದ್ದಾರೆ, ನಾಲ್ಕು ಕಾರ್ಯಕ್ರಮಗಳನ್ನು ಒಂದೇ ಸಮಯದಲ್ಲಿ ನಿಗದಿಪಡಿಸಲು ಚಿಂತನೆ ನಡೆಸಿದ್ದು, ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸಿ ಎಂದು ಪ್ರಧಾನಿ ಹೇಳಿದ್ದಾರೆ ಎಂದರು. ಉಪ ಚುನಾವಣಾ ಕದನದಲ್ಲಿ ಹಾನಗಲ್ ಕ್ಷೇತ್ರದಲ್ಲಿ ಅಲ್ಪ ಪ್ರಮಾಣದಲ್ಲಿ ಸೋತಿದ್ದೇವೆ ಎಂದಾಗ ಚುನಾವಣೆಯಲ್ಲಿ ಸೋಲು-ಗೆಲುವು ಇದ್ದಿದ್ದೇ, ಎದೆಗುಂದಬೇಡಿ ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಕೆಲಸಗಳನ್ನು ಮಾಡಿ ಎಂದಿದ್ದಾರೆ ಎಂದು ಹೇಳಿದರು.



Join Whatsapp