ಮಾನವೀಯತೆಯಿಂದ 130 ಕೋಟಿ ಜನ ಬದುಕುವುದೇ ನಿಜವಾದ ಹಿಂದುತ್ವ : ಅರವಿಂದ ಕೇಜ್ರಿವಾಲ್

Prasthutha|

ನವದೆಹಲಿ: ಈ ದೇಶದ 130 ಕೋಟಿ ಜನ ಒಬ್ಬರಿಗೊಬ್ಬರು ಮಾನವೀಯತೆಯಿಂದ ಬದುಕುವುದೇ ನಿಜವಾದ ಹಿಂದುತ್ವ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು ಮೃದು ಹಿಂದುತ್ವದತ್ತ ಹೊರಳುತ್ತಿರುವುದನ್ನು ತಳ್ಳಿ ಹಾಕಿದ್ದಾರೆ. ‘ಮೃದು ಹಿಂದುತ್ವ ಎಂದರೆ ನನಗೇನು ಗೊತ್ತಿಲ್ಲ. ಇಲ್ಲಿ ಬೇಕಾಗಿರುವುದು ನಿಜವಾದ ಹಿಂದುತ್ವ. ಈ ದೇಶದ 130 ಕೋಟಿ ಜನ ಒಬ್ಬರಿಗೊಬ್ಬರು ಮಾನವೀಯತೆಯಿಂದ ಬದುಕುವುದೇ ನಿಜವಾದ ಹಿಂದುತ್ವ. ಇದನ್ನೇ ಆಮ್ ಆದ್ಮಿ ಪಕ್ಷ ಬೆಂಬಲಿಸುತ್ತದೆ’ ಎಂದು ಹೇಳಿದ್ದಾರೆ.

- Advertisement -

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಹಾಗೂ ಗೋವಾ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದೆ. ಈ ಚುನಾವಣೆಗಳಿಗಾಗಿ ಮತದಾರರನ್ನು ಸೆಳೆಯಲು ಕೇಜ್ರಿವಾಲ್ ಮೃದು ಹಿಂದುತ್ವದತ್ತ ಹೆಜ್ಜೆಹಾಕುತ್ತಿದ್ದಾರೆ ಎನ್ನುವ ಆರೋಪಗಳು ವ್ಯಕ್ತವಾಗುತ್ತಿವೆ. ಅಲ್ಲದೇ ಕಳೆದ ಕೆಲವು ದಿನಗಳ ಹಿಂದಷ್ಟೆ ಕೇಜ್ರಿವಾಲ್ ಅಯೋಧ್ಯೆ ರಾಮಜನ್ಮಭೂಮಿಗೂ ಭೇಟಿ ನೀಡಿ ದೆಹಲಿ ಹಿರಿಯ ನಾಗರಿಕರಿಗೆ ಉಚಿತ ತೀರ್ಥಯಾತ್ರೆಗಾಗಿ ಯೋಜನೆ ಘೋಷಿಸಿದ್ದರು.

ದಲಿತರ ಮೇಲೆ ಹಲ್ಲೆ ಮಾಡುವುದು ಹಿಂದುತ್ವ ಅಲ್ಲ, ‘ಧರ್ಮದ ಹೆಸರಿನಲ್ಲಿ ಜನರನ್ನು ಬೇರ್ಪಡಿಸುವುದು, ಗಲಭೆಗಳನ್ನು ಹುಟ್ಟುಹಾಕುವುದೂ ಕೂಡ ಹಿಂದುತ್ವ ಅಲ್ಲ, ಎಲ್ಲರೂ ಒಬ್ಬರಿಗೊಬ್ಬರು ಮಾನವೀಯತೆಯಿಂದ ಬದುಕುವುದೇ ಹಿಂದುತ್ವ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.‘ಅಯೋಧ್ಯೆಯಲ್ಲಿ ರಾಮನ ದರ್ಶನ ಮಾಡಿದರೆ, ದೀಪಾವಳಿ ಆಚರಿಸಿದರೇ ಪಾಪವಾಗುತ್ತದೆಯೇ ಎಂದು ಪ್ರಶ್ನಿಸಿರುವ ಕೇಜ್ರಿವಾಲ್ ಪ್ರಸ್ತುತ ದೇಶದಲ್ಲಿ ಹಿಂದುತ್ವದ ಹೆಸರಿನಲ್ಲಿ ನಡೆಯುತ್ತಿರುವುದು ನಿಜವಾದ ಹಿಂದುತ್ವ ಅಲ್ಲ’ ಎಂದು ಹಿಂದುತ್ವ ಸಂಘಟನೆಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.



Join Whatsapp