ದುಬೈ: ಐಸಿಸಿ ಟಿ-20 ವಿಶ್ವಕಪ್ ಸೂಪರ್-12 ಹಂತದ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ದುರ್ಬಲ ನಮೀಬಿಯಾ ತಂಡದ ವಿರುದ್ಧ 9 ವಿಕೆಟ್’ಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಮುಖ್ಯ ಕೋಚ್ ಹುದ್ದೆಯಿಂದ ನಿರ್ಗಮಿಸುತ್ತಿರುವ ರವಿಶಾಸ್ತ್ರಿ ಹಾಗೂ ನಾಯಕನಾಗಿ ಕೊನೇಯ ಟಿ-20 ಪಂದ್ಯವನ್ನಾಡಿದ ವಿರಾಟ್ ಕೊಹ್ಲಿಗೆ ಗೆಲುವಿನ ವಿದಾಯ ದೊರೆತಿದೆ.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ್ದು ನಮೀಬಿಯಾಗೆ ಬ್ಯಾಟಿಂಗ್ ಬಿಟ್ಟು ಕೊಟ್ಟ ಟೀಮ್ ಇಂಡಿಯಾ, ಎರಾಸ್ಮಸ್ ಪಡೆಯನ್ನು 132 ರನ್’ಗಳಿಗೆ ನಿಯಂತ್ರಿಸಿತ್ತು. ಚೇಸಿಂಗ್ ವೇಳೆ ಬಿರುಸಿನ ಆರಂಭ ಒದಗಿಸಿದ ರೋಹಿತ್-ರಾಹುಲ್ ಜೋಡಿ ಅರ್ಧಶತಕಗಳ ಮೂಲಕ ಮಿಂಚಿದರು. ರೋಹಿತ್ ಶರ್ಮಾ 56 ರನ್’ಗಳಿಸಿ ಔಟಾದರೆ, ರಾಹುಲ್ 54 ರನ್’ಗಳಿಸಿ ಅಜೇಯರಾಗುಳಿದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ನಮೀಬಿಯಾ ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 132 ರನ್ ಗಳಿಸಿತ್ತು. ಡೆವಿಡ್ ವೀಸ್ 26 ಹಾಗೂ ಆರಂಭಿಕ ಸ್ಟೀಫನ್ ಬಾರ್ಡ್ 21 ರನ್’ಗಳಿಸಿ ತಂಡದ ನೆರವಿಗೆ ನಿಂತರು. ಭಾರತದ ಪರ ಸ್ಪಿನ್ನರ್’ಗಳಾದ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.
ನಮೀಬಿಯಾ ವಿರುದ್ಧದ ಗೆಲುವಿನೊಂದಿಗೆ ಐಸಿಸಿ ಟಿ-20 ವಿಶ್ವಕಪ್’ನಿಂದ ಟೀಮ್ ಇಂಡಿಯಾ ಭಾರದ ಹೃದಯದಿಂದಲೇ ಹೊರನಡೆದಿದೆ. ಜೊತೆಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಮುಖ್ಯ ಕೋಚ್ ರವಿಶಾಸ್ತ್ರಿ ಜೋಡಿ ಯುಗವೂ ಮುಕ್ತಾಯವಾಗಿದೆ.
ಕೊಹ್ಲಿ ನಾಯಕತ್ಬದಲ್ಲಿ ಟೀಮ್ ಇಂಡಿಯಾ ಒಟ್ಟು 50 ಟಿ-20 ಪಂದ್ಯಗಳನ್ನು ಆಡಿದೆ. ಇದರಲ್ಲಿ 32 ಪಂದ್ಯಗಳಲ್ಲಿ ಗೆಲುವು ಕಂಡಿದ್ದು ಕೇವಲ 16 ಪಂದ್ಯಗಳಷ್ಟೇ ಸೋಲು ಕಂಡಿದೆ. ಎಂಎಸ್ ಧೋನಿ, ಇಯಾನ್ ಮಾರ್ಗನ್, ವಿಲಿಯಮ್ಸನ್ ಹಾಗೂ ಆರನ್ ಫಿಂಚ್ ಅವರಿಗಿಂತಲೂ ಕ್ಯಾಪ್ಟನ್ ಕೊಹ್ಲಿ ಉತ್ತಮ ಗೆಲುವಿನ ದಾಖಲೆ ಹೊಂದಿದ್ದಾರೆ. ಆದರೆ ಚೊಚ್ಚಲ ಬಾರಿಗೆ ಮಹತ್ವದ ವಿಶ್ವಕಪ್ ಟೂರ್ನಿಯಲ್ಲಿ ಮಾತ್ರ ಕೊಹ್ಲಿಗೆ ಅದೃಷ್ಟ ಕೈಕೊಟ್ಟಿದೆ.
ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಕಳೆದ 7 ವರ್ಷಗಳಿಂದ ರವಿಶಾಸ್ತ್ರಿ ಕರ್ತವ್ಯ ನಿರ್ವಹಿಸಿದ್ದಾರೆ. 2014ರಲ್ಲಿ ತಂಡದ ನಿರ್ದೇಶಕರಾಗಿ ನೇಮಕಗೊಂಡಿದ್ದ ಶಾಸ್ತ್ರಿ, 2015ರ ಏಕದಿನ ವಿಶ್ವಕಪ್’ವರೆಗೆ ಕೋಚ್ ಆಗಿದ್ದರು. ಬಳಿಕ 2017ರಲ್ಲಿ ಮುಖ್ಯ ಕೋಚ್ ಆಗಿ ಮತ್ತೆ ತಂಡವನ್ನು ಕೂಡಿಕೊಂಡರು.