ದುಬೈ : ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಹೋರಾಟದ ಚಿತ್ರಣ ಹೊರಬಿದ್ದ ಬಳಿಕ ಸೂಪರ್-12 ಹಂತದ ಅಂತಿಮ ಪಂದ್ಯದಲ್ಲಿ ಸೋಮವಾರ ಟೀಮ್ ಇಂಡಿಯಾ ದುರ್ಬಲ ನಮೀಬಿಯಾ ತಂಡವನ್ನು ಎದುರಿಸಲಿದೆ.
ವಿಶ್ವಕಪ್ ಟೂರ್ನಿಯ ಬಳಿಕ ಬಳಿಕ ಟೀಮ್ ಇಂಡಿಯಾದ ಟಿ-20 ನಾಯಕತ್ವ ಸ್ಥಾನದಿಂದ ನಿರ್ಗಮಿಸುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದರು. ನಮೀಬಿಯಾ ವಿರುದ್ಧ ಟಿ-20 ತಂಡದ ನಾಯಕನಾಗಿ ಕೊನೇಯ ಬಾರಿಗೆ ತಂಡವನ್ನು ಮುನ್ನಡೆಸಲಿರುವ ಕ್ಯಾಪ್ಟನ್ ಕೊಹ್ಲಿಗೆ ಗೆಲುವಿನ ವಿದಾಯ ನೀಡಲು ಟೀಮ್ ಇಂಡಿಯಾ ಸಜ್ಜಾಗಿದೆ.
ಕೊಹ್ಲಿ ನಾಯಕತ್ಬದಲ್ಲಿ ಟೀಮ್ ಇಂಡಿಯಾ ಇದುವರೆಗೆ 49 ಟಿ-20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 31 ಪಂದ್ಯಗಳಲ್ಲಿ ಗೆಲುವು ಕಂಡಿದ್ದು ಕೇವಲ 16 ಪಂದ್ಯಗಳಷ್ಟೇ ಸೋಲು ಕಂಡಿದೆ. ಎಂಎಸ್ ಧೋನಿ, ಇಯಾನ್ ಮಾರ್ಗನ್, ವಿಲಿಯಮ್ಸನ್ ಹಾಗೂ ಆರನ್ ಫಿಂಚ್ ಅವರಿಗಿಂತಲೂ ಕ್ಯಾಪ್ಟನ್ ಕೊಹ್ಲಿ ಉತ್ತಮ ಗೆಲುವಿನ ದಾಖಲೆ ಹೊಂದಿದ್ದಾರೆ. ಆದರೆ ಚೊಚ್ಚಲ ಬಾರಿಗೆ ಮಹತ್ವದ ವಿಶ್ವಕಪ್ ಟೂರ್ನಿಯಲ್ಲಿ ಮಾತ್ರ ಕೊಹ್ಲಿಗೆ ಅದೃಷ್ಟ ಕೈಕೊಟ್ಟಿದೆ.
2012ರಲ್ಲಿ ಶ್ರೀಲಂಕಾದಲ್ಲಿ ನಡೆದ ಟಿ-20 ವಿಶ್ವಕಪ್ ಟೂರ್ನಿಯ ಬಳಿಕ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಐಸಿಸಿ ಟೂರ್ನಿಯ ನಾಕೌಟ್ ಹಂತವನ್ನು ಕಾಣದೆ ಹೋರಾಟವನ್ನು ಮುಗಿಸಿದೆ. ಐಪಿಎಲ್’ನಲ್ಲೂ 2013ರಿಂದ ರಾಯಲ್ ಚಾಲೆಂಜರ್ಸ್ ತಂಡದ ನಾಯಕನಾಗಿದ್ದರೂ, ಒಮ್ಮೆಯೂ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಕೊಹ್ಲಿಗೆ ಸಾಧ್ಯವಾಗಿಲ್ಲ.