ಹೊಸದಿಲ್ಲಿ: ಪತ್ರಕರ್ತರ ವಿರುದ್ಧ ಕರಾಳ UAPA ಕಾಯ್ದೆ ಹೇರಿದ ತ್ರಿಪುರಾ ಪೊಲೀಸರ ಕ್ರಮವನ್ನು ಸುದ್ದಿ ಸಂಸ್ಥೆ ಎಡಿಟರ್ಸ್ ಗಿಲ್ಡ್ ತೀವ್ರವಾಗಿ ಖಂಡಿಸಿದೆ.
ಪತ್ರಕರ್ತರು ಸೇರಿದಂತೆ 102 ಜನರ ವಿರುದ್ಧ ತ್ರಿಪುರಾ ಪೊಲೀಸರು ಕರಾಳ UAPA ಕಾನೂನನ್ನು ಹೇರಿದ್ದು, ಕೋಮುಗಲಭೆಯ ಸತ್ಯಶೋಧನೆ ವರದಿ ತಯಾರಿಸಲು ಸ್ವತಂತ್ರ ತನಿಖಾ ಆಯೋಗದ ಭಾಗವಾಗಿ ತ್ರಿಪುರಾಕ್ಕೆ ಭೇಟಿ ನೀಡಿದ ವಕೀಲರ ವಿರುದ್ಧ ಪೊಲೀಸರು UAPA ಕಾನೂನನ್ನು ಹೇರಿದ ಬೆನ್ನಲ್ಲೇ ಪತ್ರಕರ್ತರ ವಿರುದ್ಧವೂ ಈ ಕ್ರಮ ಕೈಗೊಳ್ಳಲಾಗಿದೆ.
ತ್ರಿಪುರಾ ಹೊತ್ತಿ ಉರಿಯುತ್ತಿದೆ ಎಂದು ಟ್ವೀಟ್ ಮಾಡಿದ್ದಕ್ಕಾಗಿ ತನ್ನ ವಿರುದ್ಧ UAPA ಕಾನೂನನ್ನು ಹೇರಲಾಗಿದೆ ಎಂದು ಪತ್ರಕರ್ತ ಶ್ಯಾಮ್ ಮೀರಾ ಪ್ರಸಾದ್ ಆರೋಪಿಸಿದ್ದಾರೆ. “ಕೋಮು ಗಲಭೆಗಳನ್ನು ವರದಿ ಮಾಡುವ ಮತ್ತು ಪ್ರತಿಭಟಿಸುವವರ ಮೇಲೆ ಇಂತಹ ಕಠಿಣ ಕಾನೂನನ್ನು ಹೇರುವ ಪ್ರವೃತ್ತಿಯು ಆತಂಕಕಾರಿಯಾಗಿದೆ. ಬಹುಸಂಖ್ಯಾತರು ನಡೆಸುತ್ತಿರುವ ದಾಳಿಗಳನ್ನು ತಡೆಯಲು ಸಾಧ್ಯವಾಗದ ಸರ್ಕಾರ ಪ್ರಕರಣವನ್ನು ಮರೆಮಾಚಲು ಇಂತಹಾ ಪ್ರಯತ್ನಗಳನ್ನು ನಡೆಸುತ್ತಿದೆ” ಎಂದು ಎಡಿಟರ್ಸ್ ಗಿಲ್ಡ್ ಕಳವಳ ವ್ಯಕ್ತಪಡಿಸಿದೆ.
ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಉತ್ತರ ತ್ರಿಪುರಾದಲ್ಲಿ ವಿಶ್ವ ಹಿಂದೂ ಪರಿಷತ್ (VHP) ರ್ಯಾಲಿ ನಡೆಸಿ ಹಲವು ಮಸೀದಿಗಳನ್ನು ಹಾನಿಗೊಳಿಸಿ ಅಂಗಡಿಗಳಿಗೆ ಬೆಂಕಿ ಹಚ್ಚುವ ಮೂಲಕ ಇಡೀ ರಾಜ್ಯದಲ್ಲೇ ಕೋಮು ದಳ್ಳುರಿಗೆ ಕಾರಣವಾಗಿತ್ತು.