ಅಬುಧಾಬಿ: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದ ಅಂತಿಮ ಪಂದ್ಯದಲ್ಲಿ ನ್ಯೂಜಿಲೆಂಡ್, ಅಫ್ಘಾನಿಸ್ತಾನ ತಂಡದ ವಿರುದ್ಧ 8 ವಿಕೆಟ್ ಅಂತರದ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಟೂರ್ನಿಯಲ್ಲಿ ನಾಲ್ಕನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ.
ಅತ್ತ ನ್ಯೂಜಿಲೆಂಡ್ ಗೆಲುವು ದಾಖಲಿಸುತ್ತಲೇ ಟೀಂ ಇಂಡಿಯಾ ಟೂರ್ನಿಯಲ್ಲಿ ಸೆಮಿಫೈನಲ್ ಕಾಣದೆ ಹೊರನಡೆದಿದೆ. ಅಫ್ಘಾನ್ ಗೆಲುವು ಹಾಗೂ ರನ್’ರೇಟ್ ಲೆಕ್ಕಾಚಾರದಲ್ಲಿ ತೊಡಗಿದ್ದ ಟೀಮ್ ಇಂಡಿಯಾ ಅಭಿಮಾನಿಗಳಿಗ ತೀವ್ರ ನಿರಾಸೆಯಾಗಿದೆ.
ಉಭಯ ತಂಡಗಳಿಗೂ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ, 8 ವಿಕೆಟ್ ನಷ್ಟದಲ್ಲಿ 124 ರನ್’ಗಳಿಸಿತ್ತು. ನಜೀಬುಲ್ಲಾ ಝದ್ರಾನ್ 73 ರನ್’ಗಳಿಸಿ ಅಫ್ಘಾನ್’ ತಂಡಕ್ಕೆ ಆಸರೆಯಾದರು. ಸುಲಭ ಗುರಿಯನ್ನು ಕೇವಲ ಎರಡು ವಿಕೆಟ್ ನಷ್ಟದಲ್ಲಿ ಚೇಸ್ ಮಾಡಿದ ನ್ಯೂಜಿಲೆಂಡ್ 18.1 ಓವರ್’ಗಳಲ್ಲಿ ಗೆಲುವಿನ ನಗೆ ಬೀರಿತು. 17 ರನ್ ನೀಡಿ 4 ವಿಕೆಟ್ ಕಿತ್ತ ಟ್ರೆಂಟ್ ಬೌಲ್ಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಈ ಗೆಲುವಿನ ಮೂಲಕ ಗ್ರೂಪ್-2ರಲ್ಲಿ 5 ಪಂದ್ಯಗಳಿಂದ 8 ಅಂಕಗಳೊಂದಿಗೆ ನ್ಯೂಜಿಲೆಂಡ್ ಸೆಮಿ ಫೈನಲ್ ಟಿಕೆಟ್ ಪಡೆದಿದೆ. 4 ಪಂದ್ಯಗಳಲ್ಲಿ ನಾಲ್ಕರಲ್ಲೂ ಗೆಲುವು ಸಾಧಿಸಿರುವ ಪಾಕಿಸ್ತಾನ ಮೊದಲನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತ್ತು.
ಭಾರತ ತನ್ನ ಕೊನೇಯ ಪಂದ್ಯದಲ್ಲಿ ನಮೀಬಿಯಾ ತಂಡವನ್ನು ಎದುರಿಸಲಿದ್ದು ಭಾರಿ ಅಂತರದಲ್ಲಿ ಗೆಲುವು ಸಾಧಿಸಿದರೂ ಸಹ ಸೆಮಿಫೈನಲ್ ಹಾದಿ ಈಗಾಗಲೇ ಮುಚ್ಚಿದೆ.