ಅಗರ್ತಲಾ: ತ್ರಿಪುರಾ ಹಿಂಸಾಚಾರದ ಸತ್ಯಶೋಧನಾ ವರದಿಯನ್ನು ತಯಾರಿಸಿದ ಸುಪ್ರೀಮ್ ಕೋರ್ಟ್ ನ ವಕೀಲರ ವಿರುದ್ಧ ಹೂಡಲಾದ ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ನಡೆಯನ್ನು ಖಂಡಿಸಿರುವ ಪ್ರತಿಪಕ್ಷ ಕಾಂಗ್ರೆಸ್, ಸಿಪಿಐ (ಎಂ) ಮತ್ತು ಮಾನವ ಹಕ್ಕು ಸಂಸ್ಥೆಗಳು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ.
ಮಾತ್ರವಲ್ಲ ತ್ರಿಪುರಾದ ಹಿಂಸಾಚಾರವನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ 120 ಮಂದಿ ಸಾಮಾಜಿಕ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರ ನಡೆಯನ್ನು ಖಂಡಿಸಿ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕೋಮು ದ್ವೇಷವನ್ನು ಹರಡಲು ಯತ್ನಿಸುತ್ತಿರುವ ಆರೋಪದ ಆಧಾರದಲ್ಲಿ ಸುಪ್ರೀಮ್ ಕೋರ್ಟ್ ನ ಕೆಲ ವಕೀಲರು ಸೇರಿದಂತೆ ಮಾನವ ಹಕ್ಕು ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ವಿರೋಧ ಪಕ್ಷ ಕಾಂಗ್ರೆಸ್, ಸರ್ಕಾರವನ್ನು ಒತ್ತಾಯಿಸಿದೆ.
ತ್ರಿಪುರಾ ಹಿಂಸಾಚಾರದ ನೈಜತೆಯನ್ನು ತೆರೆದಿಡುವ ಸಲುವಾಗಿ ಸತ್ಯಶೋಧನಾ ತಂಡದೊಂದಿಗೆ ತ್ರಿಪುರಾಕ್ಕೆ ಭೇಟಿ ನೀಡಿದ್ದ ಸುಪ್ರೀಂ ಕೋರ್ಟ್ ವಕೀಲರಾದ ಇಹ್ತೀಶಾಮ್ ಹಶ್ಮಿ, ಅಮಿತ್ ಶ್ರೀ ವಾಸ್ತವ್, ಎನ್.ಸಿ.ಎಚ್.ಆರ್.ಒ ರಾಷ್ಟ್ರೀಯ ಕಾರ್ಯದರ್ಶಿ ಅನ್ಸಾರ್ ಇಂದೋರಿ, ಪಿಯುಸಿಎಲ್ ಸದಸ್ಯ ಮುಖೇಶ್ ಕುಮಾರ್ ಅವರಿಗೆ ಯುಎಪಿಎ ಪ್ರಕರಣದಡಿಯಲ್ಲಿ ನೋಟಿಸ್ ನೀಡಲಾಗಿದೆ. ಮಾತ್ರವಲ್ಲ ನವೆಂಬರ್ 10 ರೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ವಕೀಲರಿಗೆ ಪೊಲೀಸರು ಸೂಚಿಸಿದ್ದಾರೆ.
ಪೊಲೀಸರ ಅಮಾನವೀಯ ನಡೆಯನ್ನು ಖಂಡಿಸಿರುವ, ಮಾನವ ಹಕ್ಕುಗಳ ಸಂಸ್ಥೆ (THRO) ಸುಪ್ರೀಂ ಕೋರ್ಟ್ ವಕೀಲರಿಗೆ ನೋಟಿಸ್ ನೀಡಿರುವುದನ್ನು ಟೀಕಿಸಿದೆ ಮತ್ತು ಇದು ಪ್ರಜಾಪ್ರಭುತ್ವ ಹಕ್ಕುಗಳ ಧ್ವನಿಯನ್ನು ದಿಕ್ಕುತಪ್ಪಿಸುವ ಷಡ್ಯಂತ್ರ ಎಂದು ಬಣ್ಣಿಸಿದೆ.