ಬೆಂಗಳೂರು: ರಾಜ್ಯಾದ್ಯಂತ ನಾಳೆಯಿಂದ ಒಂದು ತಿಂಗಳ ಕಾಲ ಮತದಾರರ ಪಟ್ಟಿಗೆ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಮಾಡಲು ರಾಜ್ಯ ಚುನಾವಣಾಧಿಕಾರಿ ಕಚೇರಿ ತೀರ್ಮಾನಿಸಿದೆ. ಯಾವುದೇ ಲೋಪವಿಲ್ಲದೆ ಶೇಕಡ 100ರಷ್ಟು ಪಟ್ಟಿಯನ್ನು ಪರಿಷ್ಕರಣೆ ಮಾಡಲು, ಈಗಿರುವ ಮತದಾರರ ಹೆಸರುಗಳಲ್ಲಿ ಉಂಟಾಗಿರುವ ಲೋಪಗಳನ್ನು ಸರಿಪಡಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ.
ಜನವರಿ 1ಕ್ಕೆ 18 ವರ್ಷ ಪೂರ್ಣವಾಗಲಿರುವ ಎಲ್ಲ ನಾಗರಿಕರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ನೀಡಲಾಗಿದೆ. ಈಗಿರುವ ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ ಬದಲಾವಣೆ ಇದ್ದಲ್ಲಿ ಪರಿಶೀಲನೆ ಮಾಡಿ, ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆ ಮಾಡಿ ಲೋಪಗಳನ್ನು ಸರಿಪಡಿಸಲು ಅವಕಾಶ ಇರಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ದೋಷವಿಲ್ಲದೆ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದ್ದು, ಯಾವುದೇ ರೀತಿಯ ಬದಲಾವಣೆಗೆ ಸಂಬಂಧಪಟ್ಟ ನೋಡಲ್ ಅಧಿಕಾರಿಗಳನ್ನು ಅಥವಾ ಆನ್ ಲೈನ್ ಮೂಲಕ ವೀಕ್ಷಿಸಿ ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಬಿಬಿಎಂಪಿಯ ಆಡಳಿತಾಧಿಕಾರಿ ರಾಕೇಶ್ ಸಿಂಗ್ ತಿಳಿಸಿದ್ದಾರೆ. ಆನ್ಲೈನ್ನಲ್ಲಿಯು ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆಗೆ ಅವಕಾಶವಿದೆ. https://www.nvsp.in, https://www.electoralsearch.in ಅಥವಾ ವೋಟರ್ ಹೆಲ್ಫ್ ಲೈನ್ ಸಂಖ್ಯೆ 1950 ಸಂಪರ್ಕಿಸಲು ಕೋರಲಾಗಿದೆ.
ರಾಜಕೀಯ ಪಕ್ಷಗಳ ಮುಖಂಡರು ಸಹ ಮತದಾರರ ಪಟ್ಟಿ ಪರಿಷ್ಕರಣೆ, ವಿಳಾಸ ಬದಲಾವಣೆ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ, ಸಂಬಂಧಪಟ್ಟ ಜಿಲ್ಲಾಡಳಿತದ ಜೊತೆ ಸಂಪರ್ಕಿಸಲು ಕೋರಲಾಗಿದೆ.
2022 ಜನವರಿ 13ರಂದು ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಿದೆ.