ಬೆಂಗಳೂರು : ಪ್ರತಿಷ್ಠಿತ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗಕ್ಕೆ ನಾಲ್ಕು ಕನ್ನಡ ಚಿತ್ರಗಳು ಆಯ್ಕೆಯಾಗಿವೆ. ನವೆಂಬರ್ 21ರಿಂದ 28ರವರೆಗೆ ಚಿತ್ರೋತ್ಸವ ನಡೆಯಲಿದ್ದು, ‘ಆಕ್ಟ್ 1978’, ‘ಡೊಳ್ಳು’, ‘ತಲೆದಂಡ’ ಮತ್ತು ‘ನೀಲಿ ಹಕ್ಕಿ’ ಕನ್ನಡ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಭಾರತ ಸರ್ಕಾರ ಆಯೋಜಿಸುವ ಅಂತಾರಾಷ್ಟ್ರೀಯ ಚಿತ್ರೋತ್ಸವ’ ನವೆಂಬರ್ 20ರಿಂದ ಹತ್ತು ದಿನಗಳ ಕಾಲ ನಡೆಯಲಿದೆ. ಅಲ್ಲಿ ಈ ಚಿತ್ರಗಳು ಪ್ರದರ್ಶನವಾಗಲಿವೆ. ಈ ಕುರಿತು ಮಾಧ್ಯಮಗಳಿಗೆ 1978 ಚಿತ್ರದ ನಿರ್ದೇಶಕ ಮಂಸೋರೆ ಪ್ರತಿಕ್ರಿಯಿಸಿದ್ದು, “ನಮ್ಮ ಸಿನಿಮಾ ಪನೋರಮಾಗೆ ಆಯ್ಕೆಯಾಗಿರುವುದು ಹೆಮ್ಮೆ ಮತ್ತು ಖುಷಿಯ ವಿಚಾರ. ಕೊರೋನಾದಂತಹ ದುರಿತ ಕಾಲದಲ್ಲಿ ಸಿನಿಮಾ ಬಿಡುಗಡೆ ಮಾಡಿದಾಗ ಪ್ರೇಕ್ಷಕರು ಚಿತ್ರ ಮೆಚ್ಚಿ ತಲೆದೂಗಿದ್ದರು. ವೈಯಕ್ತಿಕವಾಗಿ ನಿರ್ದೇಶಕನಾಗಿ ನನಗೆ ಇದು ವಿಶ್ವಾಸ ತುಂಬಿದೆ. ಈ ಹಿಂದಿನ ನನ್ನ ನಿರ್ದೇಶನದ ‘ಹರಿವು’, ‘ನಾತಿಚರಾಮಿ’ ಚಿತ್ರಗಳ ವಿಷಯದಲ್ಲೂ ನಾನು ಪನೋರಮಾ ಕನಸು ಕಂಡಿದ್ದೆ, ಸಾಧ್ಯವಾಗಿರಲಿಲ್ಲ. ಈ ಬಾರಿ ‘ಆಕ್ಟ್ 1978’ನಿಂದ ಕನಸು ಕೈಗೂಡಿದಂತಾಗಿದೆ. ಈ ಸಂದರ್ಭದಲ್ಲಿ ಚಿತ್ರತಂಡದ ಎಲ್ಲರನ್ನೂ ನಾನು ಸ್ಮರಿಸುತ್ತೇನೆ” ಎಂದಿದ್ದಾರೆ.
ಅಕಾಲಿಕವಾಗಿ ಅಗಲಿದ ನಟ ಸಂಚಾರಿ ವಿಜಯ್ ಅಭಿನಯದ ಎರಡು ಸಿನಿಮಾಗಳು ಪ್ರದರ್ಶನಗೊಳ್ಳುತ್ತಿರುವುದು ವಿಶೇಷವಾಗಿದೆ.
ನವೆಂಬರ್ ನಲ್ಲಿ ಗೋವಾದಲ್ಲಿ ನಡೆಯಲಿರುವ 52 ನೇಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಇದುವರೆಗೂ 13,000 ಜನ ದೇಶ ವಿದೇಶಿಯ ಪ್ರತಿನಿಧಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಪ್ರಸಕ್ತ ವರ್ಷವೂ ಕೂಡ ಹೈಬ್ರಿಡ್ ಪದ್ಧತಿಯಲ್ಲಿ ಚಲನಚಿತ್ರ ಮಹೋತ್ಸವ ನಡೆಯಲಿದೆಯಾದರೂ ಓಪನ್ ಸ್ಕ್ರೀನ್ನಲ್ಲಿ ಚಲನಚಿತ್ರ ಮಹೋತ್ಸವ ಪ್ರದರ್ಶಿಸುವ ಪ್ರಸ್ತಾವವನ್ನು ಗೋವಾ ಮನೋರಂಜನಾ ಸಂಸ್ಥೆ ಹೊಂದಿದೆ. ಪ್ರಸಕ್ತ ವರ್ಷ ಅಂತರಾಷ್ಟ್ರೀಯ ಚಲನಚಿತ್ರ ಮಹೋತ್ಸವದಲ್ಲಿ ದೇಶ ವಿದೇಶಿಯ ಸುಮಾರು 300 ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಬೀಚ್ಗಳಲ್ಲಿ ಮತ್ತು ಇತರೆಡೆ ತೆರೆದ ಪ್ರದೇಶಗಳಲ್ಲಿ ಓಪನ್ ಸ್ಕ್ರೀನ್ ಮೂಲಕ ಚಲನಚಿತ್ರ ಪ್ರದರ್ಶನ ಮಾಡುವ ಪ್ರಸ್ತಾವವಿದ್ದು ಕರೋನಾ ಸ್ಥಿತಿಯನ್ನು ನೋಡಿಕೊಂಡು ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಸುಭಾಷ ಫಳದೇಸಾಯಿ ಮಾಹಿತಿ ನೀಡಿದರು.
ಪನೋರಮಾ ವಿಭಾಗದಲ್ಲಿ ದೇಶದಲ್ಲಿ ನಿರ್ಮಾಣವಾಗುವ ಎಲ್ಲಾ ಪ್ರಾದೇಶಿಕ ಭಾಷೆಗಳ ಮತ್ತು ಉಪಭಾಷೆಗಳ ಸಿನಿಮಾಗಳಿಗೆ ಪ್ರಾತಿನಿಧ್ಯ ಸಿಗಬೇಕು. ಅದು ಸಾಧ್ಯವಾದರೆ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ ಇನ್ನಷ್ಟು ವೈವಿಧ್ಯಮಯವಾಗಿರುತ್ತದೆ ಎಂಬುದು ಸಿನಿಮಾ ವಿಶ್ಲೇಷಕರ ಅಭಿಪ್ರಾಯವಾಗಿದೆ.