ಪಣಜಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 50 ರೂಪಾಯಿಗೆ ಇಳಿಸುವವರೆಗೂ ದೇಶದಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬೇಕಾಗಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಪ್ರತಿ ಲೀಟರ್ ಗೆ ಕ್ರಮವಾಗಿ 5 ಮತ್ತು 10 ರೂ. ಗಳಷ್ಟು ಕಡಿತಗೊಳಿಸಿದ ಒಂದು ದಿನದ ನಂತರ ಸಂಸದ ರಾವತ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
ಕೇಂದ್ರದ ವಿರುದ್ಧ ತೀವ್ರ ರೀತಿಯಲ್ಲಿ ವಾಗ್ದಾಳಿ ನಡೆಸಿದ ರಾವತ್, ಮಹಾರಾಷ್ಟ್ರದಲ್ಲಿ ಎನ್.ಸಿ.ಪಿ, ಕಾಂಗ್ರೆಸ್ ನೊಂದಿಗೆ ಅಧಿಕಾರ ಹಂಚಿಕೊಂಡಿರುವ ಶಿವಸೇನಾ ಇಂಧನ ಬೆಲೆಯನ್ನು ಕಡಿಮೆ ಮಾಡುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಸುದ್ದಿಗಾರರಿಗೆ ತಿಳಿಸಿದರು.
ದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಹೀನಾಯ ಸೋಲಿನಿಂದಾಗಿ ಬಿಜೆಪಿ ಪೆಟ್ರೋಲ್, ಡೀಸೆಲ್ ಗೆ ಪ್ರತಿ ಲೀಟರ್ ಗೆ ಕ್ರಮವಾಗಿ 5 ಮತ್ತು 10 ರೂ. ಕಡಿತಗೊಳಿಸಿದೆ ಎಂದರು.
5 ರೂ. ಇಳಿಕೆಯಿಂದ ದೇಶಕ್ಕೆ ಏನು ಪ್ರಯೋಜನವಿಲ್ಲ. ಕಾರಣ ಇಂಧನದ ಬೆಲೆಯನ್ನು ಏರಿಸಿ ಮತ್ತೆ ಈಗ ಕಡಿತಗೊಳಿಸಿದೆ. ಈ ನಿಟ್ಟಿನಲ್ಲಿ ಪೆಟ್ರೋಲ್ ಬೆಲೆಯನ್ನು 50 ರೂ. ಗೆ ಇಳಿಸಲಿ ಎಂದು ಆಗ್ರಹಿಸಿದರು. ಮಾತ್ರವಲ್ಲ 50 ರೂ. ಪೆಟ್ರೋಲ್ ಸಿಗುವಂತಾಗಲೂ ದೇಶದ ಜನತೆ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸುವಂತಾಗಲಿ ಎಂದು ಮಾರ್ಮಿಕವಾಗಿ ನುಡಿದರು.