ಪಾಟ್ನಾ: ವಿಷಪೂರಿತ ಮದ್ಯ ಸೇವಿಸಿ 20 ಮಂದಿ ಮೃತಪಟ್ಟು, ಹಲವು ಮಂದಿ ಅಸ್ವಸ್ಥಗೊಂಡಿರುವ ಘಟನೆ ಗೋಪಾಲ್ ಗಂಜ್ ಜಿಲ್ಲೆಯ ಮೊಹಮದ್ ಪುರ ಗ್ರಾಮದಲ್ಲಿ ನಡೆದಿದೆ.
ಈ ಕುರಿತು ಮಾತನಾಡಿದ ಗೋಪಾಲ್ ಗಂಜ್ ಜಿಲ್ಲಾಧಿಕಾರಿ ಡಾ. ನವಲ್ ಕಿಶೋರ್ ಚೌಧರಿ ನಿಗೂಢ ಕಾರಣದಿಂದ ಸಾವುಗಳು ಸಂಭವಿಸಿವೆ. ದುರ್ಘಟನೆಯಿಂದ ಸಂತ್ರಸ್ತರಾದವರ ಮನೆಗಳಿಂದ ನಾವು ಸ್ಯಾಂಪಲ್ ಗಳನ್ನು ಸಂಗ್ರಹ ಮಾಡಿದ್ದು, ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟವರ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ಮೇಲೆ ಅವಘಡಕ್ಕೆ ಕಾರಣ ಗೊತ್ತಾಗಲಿದೆ. ಸದ್ಯಕ್ಕೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.