ದುಬೈ: ಐಸಿಸಿ ನೂತನ ಟಿ20 ರ್ಯಾಂಕಿಗ್ ಪಟ್ಟಿಯನ್ನು ಪ್ರಕಟಿಸಿದ್ದು, ಇಂಗ್ಲೆಂಡ್ ಬ್ಯಾಟರ್ ಡೇವಿಡ್ ಮಲಾನ್’ರನ್ನು ಹಿಂದಿಕ್ಕಿ ಪಾಕಿಸ್ತಾನದ ನಾಯಕ ಬಾಬರ್ ಆಜಂ ಅಗ್ರಸ್ಥಾನಕ್ಕೇರಿದ್ದಾರೆ. ಟಾಪ್ 10 ನಲ್ಲಿ ಈ ಬಾರಿ ಕೂಡ ಟೀಮ್ ಇಂಡಿಯಾದ ಇಬ್ಬರು ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ.
ಯುಎಇನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಿದ್ದಾರೆ. ಕಳೆದ ಬಾರಿ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದ ಅಫ್ಘಾನಿಸ್ತಾನ ತಂಡದ ಹಝ್ರತುಲ್ಲಾ ಝಝೈ ಈ ಬಾರಿ ಟಾಪ್ 10ನಿಂದ ಹೊರಬಿದ್ದಿದ್ದಾರೆ.
ಬೌಲರ್’ಗಳ ಪಟ್ಟಿಯಲ್ಲಿ ಶ್ರೀಲಂಕಾದ ವನಿಂದು ಹಸರಂಗ ನಂ.1 ಸ್ಥಾನದಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ 10 ಸ್ಥಾನ ಮೇಲೇರಿ 24ನೇ ಸ್ಥಾನದಲ್ಲಿದ್ದಾರೆ.
ಬ್ಯಾಟರ್’ಗಳ ರ್ಯಾಂಕಿಂಗ್’ನಲ್ಲಿ ಬಾಬರ್ ಅಜಂ 834 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಡೇವಿಡ್ ಮಲಾನ್ 798 ಅಂಕಗಳೊಂದಿಗೆ ಎರಡನೇ ಮತ್ತು ಮೂರನೇ ಸ್ಥಾನದಲ್ಲಿ 733 ಅಂಕಗಳೊಂದಿಗೆ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಇದ್ದಾರೆ. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 731 ಅಂಕಗಳೊಂದಿಗೆ ರ್ಯಾಂಕಿಂಗ್ನಲ್ಲಿ ನಾಲ್ಕನೇ ಹಾಗೂ ವಿರಾಟ್ ಕೊಹ್ಲಿ 714 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. 678 ಅಂಕಗಳೊಂದಿಗೆ ಕೆ.ಎಲ್. ರಾಹುಲ್ ಎಂಟನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಒಂದು ಸ್ಥಾನ ಮೇಲಕ್ಕೆ ಜಿಗಿದು 23ನೇ ಸ್ಥಾನಕ್ಕೆ ತಲುಪಿದ್ದಾರೆ