ನಂಬಿಗಸ್ಥ ಚೌಕೀದಾರ್ ಬೇಕಾಗಿದ್ದಾರೆ

0
562

ದೇಶದಲ್ಲಿ ಇತ್ತೀಚಿಗೆ ನಡೆದ ‘ಮೈ ಭೀ ಚೌಕೀದಾರ್’(ನಾನೂ ಕಾವಲುಗಾರ) ಎಂಬ ಅಭಿಯಾನವು ಬಹಳಷ್ಟು ಚರ್ಚೆಗೆ ಗ್ರಾಸವಾಯಿತು. ದೇಶದ ಅತಿದೊಡ್ಡ ಹಗರಣ ಎಂದು ಬಣ್ಣಿಸಲಾದ ರಫೇಲ್ ಹಗರಣದ ಕುರಿತು ರಾಹುಲ್ ಗಾಂಧಿ, ಮೋದಿ ವಿರುದ್ಧ ಗುರಿ ನೆಟ್ಟು ‘ಚೌಕಿದಾರ್ ಚೋರ್ ಹೈ’ ಎಂದು ಏರುಧ್ವನಿಯಲ್ಲಿ ಹೇಳಿದ ಬಳಿಕ ಈ ಅಭಿಯಾನವನ್ನು ನಡೆಸಲಾಯಿತು. 2014ರಲ್ಲಿದ್ದ ಮೋದಿ ಅಲೆಯ ಭ್ರಮಾಲೋಕವು 2019ರ ವೇಳೆ ವಾಸ್ತವಕ್ಕಿಳಿದಾಗ ಮತ್ತು ತನ್ನ ಅಸ್ತಿತ್ವವೇ ಕಳೆದುಕೊಳ್ಳುವ ಭೀತಿ ಮೋದಿಗೆ ಎದುರಾಗಿರುವಾಗ ಇಂಥದ್ದೊಂದು ಪ್ರಹಸನಕ್ಕೆ ಚಾಲನೆ ನೀಡಲಾಗಿದೆಯಷ್ಟೇ. ಮೋದಿ ಆಡಳಿತಾವಧಿಯಲ್ಲಿ ನಡೆದ ರಫೇಲ್ ಹಗರಣದ ಕುರಿತ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದು, ಅವರದೇ ಪಕ್ಷದ ರಾಜ್ಯಸಭಾ ಸಂಸದ ಸ್ವಾಮಿ ಸುಬ್ರಹ್ಮಣ್ಯಂ ಆಗಿದ್ದರು. ಮೋದಿ ಮೊದಲ ಬಾರಿಗೆ ಫ್ರಾನ್ಸ್ ಪ್ರವಾಸಕ್ಕೆ ತೆರಳಿ ಅಲ್ಲಿ ಕಾಲೂರಿದಾಗಲೇ, ರಫೇಲ್ ಒಪ್ಪಂದವು ಭಾರತದ ಹಿತಾಸಕ್ತಿಗೆ ಅನುಗುಣವಾಗಿಲ್ಲ ಎಂದು ಹೇಳಿದ್ದರು. ನಂತರ ಅವರ ಬಾಯಿ ಮುಚ್ಚಿಸಲಾಯಿತಾದರೂ, ಈ ಹಗರಣವು ಜಗಜ್ಜಾಹೀರಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಬೋಫೋರ್ಸ್ ಹಗರಣಕ್ಕೆ ಸಂಬಂಧಿಸಿ ಮೋದಿ-ಬಿಜೆಪಿಯು ಕಾಂಗ್ರೆಸ್ ಅನ್ನು ಯಾವ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡಿತೋ, ಅದಕ್ಕಿಂತಲೂ ಹೆಚ್ಚಾಗಿ ಮೋದಿ ರಫೇಲ್ ಹಗರಣದಲ್ಲಿ ತೀವ್ರ ಮುಖಭಂಗಕ್ಕೊಳಗಾದರು.

ಈ ರಫೇಲ್ ಹಗರಣ ಮೋದಿಯರ ಮೇಲೆ ಕನಸಲ್ಲೂ ನಿರೀಕ್ಷಿಸದ ರೀತಿಯ ಬಿರುಗಾಳಿಯಂತೆ ಬಡಿಯಿತು. ಒಂದೆಡೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ, ಚುನಾವಣಾ ಸಮೀಕ್ಷೆಗಳು ಬಿಜೆಪಿಗೆ ಉಲ್ಟಾ ಹೊಡೆಯುತ್ತಿವೆ. ಅದೇ ವೇಳೆ ರಫೇಲ್‌ಗೆ ಸಂಬಂಧಿಸಿ ಹೊರಿಸಲಾಗಿದ್ದಗಂಭೀರ ಆರೋಪಗಳು ಸ್ಪಷ್ಟವಾಗಿದ್ದವು. ಇದರ ಕುರಿತು ಸದನದಲ್ಲೂ, ಸುಪ್ರೀಂ ಕೋರ್ಟ್‌ನಲ್ಲೂ ನೀಡಲಾದ ಸ್ಪಷ್ಟನೆಗಳನ್ನು ಬಾರಿ ಬಾರಿ ಬದಲಾಯಿಸಬೇಕಾಗಿ ಬಂತು. ಈ ಬೆಳವಣಿಗೆಯು ಮತ್ತಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿತು. ಇದು ನಂತರ ‘ಚೌಕೀದಾರ್ ಚೋರ್ ಹೈ’ ಎಂಬ ಘೋಷಣೆಗೆ ಬಲ ತುಂಬಿತು.

ಈ ಹಿಂದೆ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್‌ರವರು ಮೋದಿ ಆಡಳಿತಾವಧಿಯ ಪ್ರಾರಂಭದ 8 ತಿಂಗಳ ಒಳಗೆ ಅವರ ಕಚೇರಿಗೆ ದೊಡ್ಡ ಸುಸ್ತಿದಾರರ ಪಟ್ಟಿಯನ್ನು ಕಳುಹಿಸಿದ್ದರು. ಈ ಸುಸ್ತಿದಾರರಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ವಿವಿಧ ಏಜೆನ್ಸಿಗಳ ಮೂಲಕ ತನಿಖೆ ನಡೆಸುವ ಕಾರ್ಯಾಚರಣೆಯನ್ನು ರಾಜನ್ ಬಯಸಿದ್ದರು. ಆದರೆ ಆ ವೇಳೆ ಚೌಕೀದಾರ್ ಆ ಕುರಿತು ತಲೆಕೆಡಿಸಿಕೊಳ್ಳಲಿಲ್ಲ. ಅದೇ ರೀತಿ ಮೋದಿ 2ಜಿ ಹಗರಣದ ಬೆನ್ನೇರಿ ಅಧಿಕಾರದ ಗದ್ದುಗೆಯನ್ನು ಗಳಿಸಿದ್ದರು. ಆದರೆ ಅವರ ನಿರ್ಲಕ್ಷದ ವ್ಯರ್ಥ ತನಿಖೆಯಿಂದಾಗಿ ಈ ಪ್ರಕರಣವು ಕೋರ್ಟ್‌ನಲ್ಲಿ ನಿಲ್ಲಲಿಲ್ಲ. ಜೊತೆಗೆ ಈ ಪ್ರಕರಣದ ಆರೋಪಿಗಳು ಖುಲಾಸೆಗೊಂಡರು. 2ಜಿಯಲ್ಲಿ ಭಾಗಿಯಾಗಿದ್ದ ಓರ್ವ ವ್ಯಕ್ತಿ ಪ್ರಧಾನಿಯ ಆತ್ಮೀಯನಾಗಿದ್ದ ಎಂಬ ಮಾತುಗಳು ಕೂಡ ಹರಿದಾಡಿತ್ತು ಎಂಬುದು ಇಲ್ಲಿ ಗಮನಾರ್ಹವಾಗಿದೆ.

ವಜ್ರ ವ್ಯಾಪಾರಿ ನೀರವ್ ಮೋದಿ ದೇಶವನ್ನು ಲೂಟಿ ಮಾಡಿ ಲಂಡನ್ ತೆರಳಿದಾಗ ಬ್ರಿಟಿಷ್ ಸರಕಾರವು ಆತನ ಗಂಭೀರ ವಂಚನೆಯನ್ನು ಗಮನಿಸುತ್ತಾ, ಆತನ ಬಂಧನಕ್ಕೆ ಸಹಾಯ ಮಾಡುವುದಾಗಿ ಹೇಳಿತ್ತು. ಆದರೆ ಆ ವಿಚಾರವೂ ತೆರೆಗೆ ಸರಿದಿತ್ತು. ನೀರವ್ ಮೋದಿ ಬಂಧನಕ್ಕೆ ದಾಖಲೆ ಸಂಗ್ರಹಿಸಲು ಲಂಡನ್‌ನ ತನಿಖಾ ದಳವು ಭಾರತಕ್ಕೆ ನಿಯೋಗವನ್ನು ಕಳುಹಿಸುವ ಪ್ರಸ್ತಾಪವನ್ನು ಇಟ್ಟಿತ್ತು. ಆದರೆ ಭಾರತ ಸರಕಾರವು ಇದಕ್ಕೆ ಯಾವುದೇ ಉತ್ಸಾಹ ತೋರಲಿಲ್ಲ. ಇದೀಗ ಚುನಾವಣೆಯ ಸಂದರ್ಭದಲ್ಲಿ ನೀರವ್ ಮೋದಿಯನ್ನು ಭಾರತಕ್ಕೆ ಕರೆ ತರುವ ಮಾತುಗಳು ಅಪಹಾಸ್ಯಕ್ಕೆ ಒಳಗಾಗುತ್ತಿರುವುದು ಸುಳ್ಳಲ್ಲ. ರಫೇಲ್ ಹಗರಣದ ಕುರಿತ ಇತ್ತೀಚಿನ ಬೆಳವಣಿಗೆಗಳು ದೇಶದ ಕಾವಲುಗಾರನ ವೈಫಲ್ಯದ ಮುಂದುವರಿದ ಭಾಗವಾಗಿದೆ.

ಅಂದಹಾಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಚೌಕೀದಾರ್ ಪದವು ಹೊಸತೇನಲ್ಲ. 2014ರಲ್ಲಿ ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಸಮಾವೇಶವೊಂದರಲ್ಲಿ, ದೇಶದ ಖಜಾನೆಯ ಕಾವಲುಗಾರಿಕೆ ನಡೆಸುವ ಮಾತನ್ನು ಹೇಳಿದ್ದರು. ಆದರೆ, ಅವರ ಕಾವಲುಗಾರಿಕೆಯಲ್ಲಿ ವಿಜಯ್ ಮಲ್ಯ, ಲಲಿತ್ ಮೋದಿ, ನೀರವ್ ಮೋದಿ, ಮೆಹುಲ್ ಚೋಕ್ಸಿಯಂತಹ ಹಲವಾರು ಮಂದಿ ದರೋಡೆಕೋರರು ದೇಶದ ಖಜಾನೆಯನ್ನು ದೋಚಿ ಪರಾರಿಯಾದರು. ಊರು ಕೊಳ್ಳೆ ಹೊಡೆಯಲಾಗುತ್ತಿದ್ದರೂ ಪ್ರಧಾನ ಸೇವಕರ ವೌನವು ಅವರ ಕಾವಲುಗಾರಿಕೆಯ ಕುರಿತ ನೈಜ ಕಾಳಜಿಯನ್ನು ಬಹಿರಂಗಪಡಿಸುತ್ತದೆ. ಇನ್ನು ಚುನಾವಣೆಯ ಹೊಸ್ತಿಲಲ್ಲಿ ಈ ಹೊರೆಯನ್ನು ಏಕಾಂಗಿಯಾಗಿ ನಿಭಾಯಿಸಲು ಸಾಧ್ಯವಿಲ್ಲದ ಕಾರಣದಿಂದಲೇ ಮೋದಿಯವರು ‘ಮೈ ಭೀ ಚೌಕೀದಾರ್’ ಅಭಿಯಾನದ ಮೂಲಕ ತನ್ನ ಮೇಲಿನ ಭಾರವನ್ನು ಇತರರ ಮೇಲೆ ಹೊರಿಸುವ ಉದ್ದೇಶವನ್ನಷ್ಟೇ ಹೊಂದಿರುವುದು ಸ್ಪಷ್ಟವಾಗಿದೆ.