ಐಸಿಸಿ ಟಿ-20 ವಿಶ್ವಕಪ್: ಲಂಕಾ ಬೌಲರ್’ಗಳ ಮೇಲೆ ಜಾಸ್ ಬಟ್ಲರ್ ಶತಕದ ಸವಾರಿ

Prasthutha|

ಶಾರ್ಜಾ: ಯುಎಇನಲ್ಲಿ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಶತಕ ದಾಖಲಾಗಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಹೊಡೆತಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಇಂಗ್ಲೆಂಡ್’ನ ಆರಂಭಿಕ ಬ್ಯಾಟರ್ ಜಾಸ್ ಬಟ್ಲರ್, ವೃತ್ತಿ ಜೀವನದ ಚೊಚ್ಚಲ ಟಿ-20 ಶತಕ ದಾಖಲಿಸಿ ಮಿಂಚಿದ್ದಾರೆ.

- Advertisement -

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಶ್ರೀಲಂಕಾ ಇಂಗ್ಲೆಂಡ್’ಗೆ ಬ್ಯಾಟಿಂಗ್ ಬಿಟ್ಟುಕೊಟ್ಟರೂ ಲಂಕಾ ಬೌಲಿಂಗ್ ದಾಳಿ ಆಂಗ್ಲಾ ಬ್ಯಾಟರ್’ಗಳಿಗೆ ಸವಾಲಾಗಲೇ ಇಲ್ಲ. ಆರಂಭದಿಂದಲೂ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಜಾಸ್ ಬಟ್ಲರ್, 67 ಎಸೆತಗಳನ್ನು ಎದುರಿಸಿ 6 ಭರ್ಜರಿ ಸಿಕ್ಸರ್ ಹಾಗೂ 6 ಭರ್ಜರಿ ಬೌಂಡರಿಗಳ ನೆರವಿನಿಂದ  101 ರನ್’ಗಳಿಸಿ ಅಜೇಯರಾಗುಳಿದರು.

ಇನ್ನಿಂಗ್ಸ್’ನ ಅಂತಿಮ ಎಸೆತದಲ್ಲಿ ಬಟ್ಲರ್ ಶತಕಕ್ಕೆ 5 ರನ್’ಗಳ ಅಗತ್ಯವಿತ್ತು. ದುಶ್ಮಂತ್ ಚಮೀರಾ ಎಸೆದ ಫುಲ್’ಟಾಸ್ ಎಸೆತವನ್ನು ಸಿಕ್ಸರ್’ಗಟ್ಟಿದ ಬಟ್ಲರ್ ಚೊಚ್ಚಲ ಟಿ-20 ಶತಕವನ್ನು ಪೂರ್ತಿಗೊಳಿಸಿದರು. 45 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ತಿಗೊಳಿಸಿದ್ದ ಬಟ್ಲರ್, ಬಳಿಕ ಕೇವಲ 22 ಎಸೆತಗಳಲ್ಲಿ 50 ರನ್’ಗಳಿಸಿ ಲಂಕಾ ಬೌಲರ್’ಗಳ ಬೆವರಿಳಿಸಿದರು. ಆ ಮೂಲಕ ಟಿ-20 ಕ್ರಿಕೆಟ್’ನಲ್ಲಿ ಶತಕ ಗಳಿಸುತ್ತಿರುವ ಇಂಗ್ಲೆಂಡ್’ನ 4ನೇ ಬ್ಯಾಟರ್ ಎನಿಸಿದರು. ಇದಕ್ಕೂ ಮೊದಲು ಅಲೆಕ್ಸ್ ಹೇಲ್ಸ್, ಡೇವಿಡ್ ಮಲನ್ ಹಾಗೂ ಲ್ಯಾಮ್ ಲಿವಿಂಗ್’ಸ್ಟನ್ ಶತಕ ದಾಖಲಿಸಿದ್ದಾರೆ.

- Advertisement -

ಜೇಸನ್ ರಾಯ್ 9, ಡೇವಿಡ್ ಮಲನ್ 6 ರನ್’ಗಳಿಸಿದರೆ ಜಾನಿ ಬೇರ್’ಸ್ಟೋ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಕ್ಯಾಪ್ಟನ್ ಮಾರ್ಗನ್ ಬಿರುಸಿನ 40 ರನ್’ಗಳಿಸಿ ಔಟಾದರು. ಲಂಕಾ ಪರ ವಾನಿಂದು ಹಸರಂಗ 4 ಓವರ್’ನಲ್ಲಿ 21 ರನ್’ಬಿಟ್ಟುಕೊಟ್ಟು 3 ಪ್ರಮುಖ ವಿಕೆಟ್ ಪಡೆದರು. ಇಂದಿನ ಪಂದ್ಯದಲ್ಲಿ ಲಂಕಾ ಸೋಲು ಕಂಡರೆ ಸೆಮಿಫೈನಲ್ ಫೈಟ್’ನಿಂದ ಹೊರನಡೆಯಲಿದೆ.



Join Whatsapp