ರಿಯಾದ್: 66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅನಿವಾಸಿ ಕನ್ನಡಿಗರನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಒಂದುಗೂಡಿಸುವ ನಿಟ್ಟಿನಲ್ಲಿ ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ವತಿಯಿಂದ ನವೆಂಬರ್ 25ರಂದು “ಕರುನಾಡ ಸಂಭ್ರಮ-2021” ಎಂಬ ಕುಟುಂಬ ಸಮ್ಮಿಲನ ಹಮ್ಮಿಕೊಳ್ಳಲಾಗಿದೆ ಎಂದು ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಪೂಂಜಲ್ ಕಟ್ಟೆ ತಿಳಿಸಿದ್ದಾರೆ.
ರಿಯಾದ್ ನ ಸೋಶಿಯಲ್ ಫೋರಂ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಿವಾಸಿ ಭಾರತೀಯರ ಸಂಕಷ್ಟಗಳಿಗೆ ಸದಾ ಆಸರೆಯಾಗಿ ನಿಲ್ಲುವ ಇಂಡಿಯನ್ ಸೋಶಿಯಲ್ ಫೋರಂ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲು ತೀರ್ಮಾನಿಸಿದೆ. “ಕರುನಾಡ ಸಂಭ್ರಮ” ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಅನಿವಾಸಿ ಕನ್ನಡಿಗರ ಬೃಹತ್ ಸಮ್ಮಿಲನವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಗೊಳಿಸಬೇಕು ಎಂದು ಅನಿವಾಸಿಗಳಿಗೆ ಮನವಿ ಮಾಡಿದರು.
ಈ ಕಾರ್ಯಕ್ರಮವು ರಿಯಾದ್ ನ ಅಲ್ ಅರಫಾತ್ ರಸ್ತೆಯಲ್ಲಿರುವ ವಾಹತ್ ಅಲ್ ರಿಯಾದ್ ಫಾರ್ಮ್ ಹೌಸ್ ನಲ್ಲಿ ನವೆಂಬರ್ 25 ರಂದು ನಡೆಯಲಿದ್ದು, ವಿವಿಧ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳು, ಸಾರ್ವಜನಿಕ ಭಾಷಣ, ಮತ್ತು ವರ್ಣರಂಜಿತ ಕನ್ನಡದ ಪರಂಪರೆಯನ್ನು ಸಾರುವ ಎಕ್ಸ್ಪೋ ಕಾರ್ಯಕ್ರಮಗಳು ನಡೆಯಲಿವೆ. ಸದಾ ವೃತ್ತಿಪರ ಜೀವನದಲ್ಲಿ ನಿರತರಾಗಿರುವ ಅನಿವಾಸಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸೌದಿ ಅರೇಬಿಯಾದಲ್ಲಿ ಕನ್ನಡದ ಸಂಪನ್ನು ಸವಿಯುವ ಮತ್ತು ಅನಿವಾಸಿ ಕನ್ನಡಿಗರೊಂದಿಗೆ ಬೆರೆಯುವ ಒಂದು ಮಹತ್ತರ ಅವಕಾಶ ನೀಡುತ್ತದೆ ಎಂದು ಹೇಳಿದರು.
ಪೋಸ್ಟರ್ ಮತ್ತು ಲೋಗೊ ಬಿಡುಗಡೆ:
ಇದೇ ಸಂದರ್ಭದಲ್ಲಿ ಕರುನಾಡ ಸಂಭ್ರಮ ಕಾರ್ಯಕ್ರಮದ ಪ್ರಚಾರಾರ್ಥಕವಾಗಿ ಪೋಸ್ಟರ್ ಮತ್ತು ಲೋಗೋವನ್ನು ಇಂಡಿಯನ್ ಸೋಶಿಯಲ್ ಫೋರಂನ ಪದಾಧಿಕಾರಿಗಳು ಬಿಡುಗಡೆಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಇಂಡಿಯನ್ ಸೋಶಿಯಲ್ ಫೋರಂ ರಿಯಾದ್, ಕರ್ನಾಟಕ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿರಾಜ್ ಸಜೀಪ, ಕಾರ್ಯದರ್ಶಿಗಳಾದ ಅಝ್ಗರ್ ಅಬೂಬಕ್ಕರ್ ಚಕ್ಕಮಕಿ ಮತ್ತು ಜವಾದ್ ಬಸ್ರೂರು ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ನಝೀರ್ ಹಂಡೇಲ್, ಮಿಹಫ್ ಸುಲ್ತಾನ್ ಉಪಸ್ಥಿತರಿದ್ದರು.