ದುಬೈ; 2022ರ ಮಾರ್ಚ್ನಲ್ಲಿ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ -ಐಪಿಎಲ್ 15 ನೇ ಆವೃತ್ತಿಯ ಹರಾಜು ನೀತಿ ಹಾಗೂ ಆಟಗಾರರನ್ನು ಉಳಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ನಿಯಮಾವಳಿಯನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಬಿಸಿಸಿಐ ಪ್ರಕಟಿಸಿದೆ.
ಐಪಿಎಲ್’ನ 15ನೇ ಆವೃತ್ತಿಯಲ್ಲಿ ಈಗಿರುವ 8 ತಂಡಗಳ ಜತೆಗೆ ಹೊಸದಾಗಿ ಮತ್ತೆರಡು ತಂಡಗಳು ಸೇರ್ಪಡೆಯಾಗಿದ್ದು, ಒಟ್ಟು 10 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಆಟಗಾರರ ಆಯ್ಕೆಗಾಗಿ ಮೆಗಾ ಹರಾಜು ನಡೆಯಲಿದ್ದು ಈಗ ಇರುವ ಎಲ್ಲಾ ತಂಡಗಳ ಸಂಪೂರ್ಣ ಚಿತ್ರಣ ಬದಲಾಗಲಿದೆ.
ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಆಟಗಾರರನ್ನು ಉಳಿಸಿಕೊಳ್ಳುವ ಕುರಿತ ನಿಯಮಗಳನ್ನು ಬಿಸಿಸಿಐ ಪ್ರಕಟಿಸಿದ್ದು, ಈಗಿರುವ ಎಂಟು ತಂಡಗಳು ಗರಿಷ್ಠ 4 ಆಟಗಾರರನ್ನು ರಿಟೇನ್ ಮಾಡಬಹುದಾಗಿದೆ.
ಹೊಸತಾಗಿ ಸೇರ್ಪಡೆಯಾಗಿರುವ ಲಖನೌ ಹಾಗೂ ಅಹಮದಾಬಾದ್ ತಂಡಗಳು ಹರಾಜಿಗೂ ಮುಂಚಿತವಾಗಿ 3 ಆಟಗಾರರನ್ನು ಆಯ್ಕೆಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.
ಸದ್ಯ ಇರುವ 8 ಫ್ರಾಂಚೈಸಿಗಳು ಉಳಿಸಿಕೊಳ್ಳುವ ನಾಲ್ಕು ಆಟಗಾರರ ಪೈಕಿ ಗರಿಷ್ಠ ಮೂವರು ಭಾರತೀಯ ಮತ್ತು ಓರ್ವ ವಿದೇಶಿ ಅಥವಾ ಇಬ್ಬರು ಭಾರತೀಯ ಮತ್ತು ಇಬ್ಬರು ವಿದೇಶಿ ಆಟಗಾರರಾಗಿರರನ್ನು ಉಳಿಸಿಕೊಳ್ಳಬಹುದಾಗಿದೆ.
ಎರಡಕ್ಕಿಂತ ಹೆಚ್ಚು ಅನ್ಕ್ಯಾಪ್ಡ್ ಆಟಗಾರರನ್ನು ಖರೀದಿಸುವಂತಿಲ್ಲ.
ಹೊಸ ಫ್ರಾಂಚೈಸಿಗಳು, ಗರಿಷ್ಠ ಇಬ್ಬರು ಭಾರತೀಯರು ಹಾಗೂ ಓರ್ವ ವಿದೇಶಿ ಆಟಗಾರನನ್ನು ಆಯ್ಕೆ ಮಾಡಬಹುದಾಗಿದೆ. ಹಾಗೆಯೇ ಓರ್ವ ಅನ್ಕ್ಯಾಪ್ಡ್ ಆಟಗಾರನನ್ನು ಪಡೆಯಬಹುದಾಗಿದೆ. ರೈಟ್ ಟು ಮ್ಯಾಚ್ (ಆರ್ಟಿಎಂ) ಕಾರ್ಡ್ ಆಯ್ಕೆಯನ್ನು ಈಗಾಗಲೇ ರದ್ದುಮಾಡಲಾಗಿದೆ.
ಸದ್ಯ ಇರುವ 8 ಫ್ರಾಂಚೈಸಿಗಳು ನವೆಂಬರ್ 1ರಿಂದ 30ರ ಒಳಗಾಗಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಬೇಕಾಗಿದೆ.
ಬಳಿಕ ಎರಡು ಹೊಸ ತಂಡಗಳಿಗೆ ಡಿಸೆಂಬರ್ 1ರಿಂದ 25ರ ವರೆಗೆ ಆಟಗಾರರನ್ನು ಆಯ್ಕೆಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ತಂಡವೊಂದು 4 ಆಟಗಾರರನ್ನು ಉಳಿಸಿಕೊಳ್ಳುವುದಾದರೆ ₹42 ಕೋಟಿ, 3 ಆಟಗಾರರಿಗೆ ₹33 ಕೋಟಿ, ಇಬ್ಬರು ಆಟಗಾರರಿಗೆ ₹24 ಕೋಟಿ ಮತ್ತು ಓರ್ವ ಆಟಗಾರನಿಗೆ ₹14 ಕೋಟಿ ವ್ಯಯಿಸಬೇಕಾಗಿದೆ. ಅನ್ಕ್ಯಾಪ್ಡ್ ಆಟಗಾರನನ್ನು ಉಳಿಸಿಕೊಳ್ಳುವುದಾದರೆ ತಲಾ ₹4 ಕೋಟಿ ವ್ಯಯಿಸಬೇಕಿದೆ.
ನಾಲ್ಕು ಆಟಗಾರರನ್ನು ಉಳಿಸಿಕೊಂಡರೆ ಮೊದಲ ಆಟಗಾರನಿಗೆ ₹16 ಕೋಟಿ, ಎರಡನೇ ಆಟಗಾರನಿಗೆ ₹12 ಕೋಟಿ, ಮೂರನೇ ಆಟಗಾರನಿಗೆ ₹8 ಕೋಟಿ, ನಾಲ್ಕನೇ ಆಟಗಾರನಿಗೆ ₹6 ಕೋಟಿ ಪಾವತಿಸಬೇಕಾಗುತ್ತದೆ.
ಇನ್ನು ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯು ಕಡಿಮೆಯಾದಲ್ಲಿ ಈ ಮೊತ್ತದಲ್ಲೂ ಬದಲಾವಣೆಯಾಗಲಿದೆ.
ಐಪಿಎಲ್ 2022ರ ಆವೃತ್ತಿಗಾಗಿ ಆಟಗಾರರ ಖರೀದಿಗಾಗಿ ತಂಡಗಳು ವ್ಯಯಿಸಬಹುದಾದ ಪರ್ಸ್ ಮೊತ್ತವನ್ನು ಈಗಿರುವ ₹85 ಕೋಟಿಯಿಂದ ₹90 ಕೋಟಿಗೆ ಏರಿಸಲಾಗಿದೆ