ನವದೆಹಲಿ: ತ್ರಿಪುರಾದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಸಂಘಪರಿವಾರ ನಡೆಸುತ್ತಿರುವ ಹಿಂಸಾಚಾರ ಮತ್ತು ಜನಾಂಗೀಯ ಹತ್ಯೆಗಳನ್ನು ತಡೆಯುವಲ್ಲಿ ಸರ್ಕಾರಿ ಯಂತ್ರ ಸಂಪೂರ್ಣ ವಿಫಲವಾಗಿದೆ ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್ –ಎನ್ ಡಬ್ಲ್ಯುಎಫ್ ಆರೋಪಿಸಿದೆ.
ಶಾಂತಿ, ಸೌಹಾರ್ದತೆ ಮತ್ತು ವೈವಿಧ್ಯಮಯ ಸಂಸ್ಕೃತಿಗಳಿಗೆ ಹೆಸರುವಾಸಿಯಾಗಿರುವ ಅಸ್ಸಾಂನ ತ್ರಿಪುರಾದಲ್ಲಿ ರಕ್ತದೋಕುಳಿ ಹರಿಸುವ ಮೂಲಕ ಅನಾಗರಿಕತೆಯನ್ನು ಪರಿಚಯಿಸಿದೆ ಎಂದು ಎನ್.ಡ್ಬ್ಯೂ.ಎಫ್ ಆರೋಪಿಸಿದೆ.
ಇತ್ತೀಚೆಗೆ ನೆರೆಯ ಬಾಂಗ್ಲಾದೇಶದಲ್ಲಿ ಹಿಂಸಾಚಾರವನ್ನೇ ನೆಪವಾಗಿಟ್ಟು ಆರೆಸ್ಸೆಸ್, ವಿ.ಎಚ್.ಪಿ ಮತ್ತು ಆಡಳಿತರೂಢ ಬಿಜೆಪಿ ಸಂಯೋಜನೆಯೊಂದಿಗೆ ನಡೆದ ಹಿಂಸಾಚಾರದಲ್ಲಿ ಅನೇಕ ಮುಸ್ಲಿಮರ ಮಾರಣಹೋಮ, ಮಸೀದಿ ಧ್ವಂಸ, ಅಂಗಡಿಗಳಿಗೆ ಬೆಂಕಿ ಮತ್ತು ಲೂಟಿಗೈದ ಘಟನೆಯನ್ನು ಉಲ್ಲೇಖಿಸಿ ಎನ್.ಡ್ಬ್ಯೂ.ಎಫ್ ನಿಂದ ಈ ಹೇಳಿಕೆಯನ್ನು ನೀಡಿದೆ.
ಸದ್ಯ ತ್ರಿಪುರಾದಲ್ಲಿ ಗಲಭೆಯನ್ನು ನಿಯಂತ್ರಿಸುವ ಸಲುವಾಗಿ ಸಿ.ಆರ್.ಪಿ.ಸಿ 144 ನಿಷೇಧ ಹೇರಲಾಗಿದ್ದರೂ, ಸಂಘಪರಿವಾರದ ಕಾರ್ಯಕರ್ತರು ಇದನ್ನು ಉಲ್ಲಂಘಿಸಿ ಅಲ್ಪಸಂಖ್ಯಾತರ ಮನೆಗಳು, ಮಳಿಗೆಗಳನ್ನು ಲೂಟಿ ಮಾಡುತ್ತಿದ್ದಾರೆ. ಮುಸ್ಲಿಮ್ ವಿರೋಧಿ ಘೋಷಣೆಗಳೊಂದಿಗೆ ಅವರ ನಿವಾಸಗಳಿಗೆ ಮಾರಕಾಯುಧಗಳೊಂದಿಗೆ ದಾಳಿ ಮಾಡಿ ಅಪಾರ ಪ್ರಾಣ, ಮಾನ ಮತ್ತು ಆಸ್ತಿ ಪಾಸ್ತಿ ಗಳನ್ನು ಧ್ವಂಸ ಮಾಡಿರುವುದು ಆತಂಕಕಾರಿ ಬೆಳವಣಿಗೆ ಎಂದು ಅದು ಬಣ್ಣಿಸಿದೆ.
ದೇಶದಲ್ಲಿ ಕಾನೂನು, ಸುವ್ಯವಸ್ಥೆ ಖಚಿತಪಡಿಸುವುದು ಸರ್ಕಾರದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ಗಲಭೆಕೋರರನ್ನು ಗುರುತಿಸಿ ಕಠಿಣ ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕು. ಸಂತ್ರಸ್ತರ ಕುಟುಂಬಗಳಿಗೆ ವೈದ್ಯಕೀಯ ನೆರವು ಮತ್ತು ಪರಿಹಾರವನ್ನು ಒದಗಿಸಬೇಕೆಂದು ನಾಷನಲ್ ವಿಮೆನ್ಸ್ ಫ್ರಂಟ್ ಇಂಡಿಯಾ ಹೇಳಿಕೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದೆ.