ಲಕ್ನೋ: ಇತ್ತೀಚೆಗೆ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಜಯಗಳಿಸಿದಾಗ ಸಂಭ್ರಮಾಚರಣೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಬಂಧಿಸಲ್ಪಟ್ಟ ಕಾಶ್ಮೀರಿ ವಿದ್ಯಾರ್ಥಿಗಳನ್ನು ಗುರುವಾರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ ನ್ಯಾಯಾಲಯದ ಆವರಣದಲ್ಲೇ ದೈಹಿಕವಾಗಿ ಅವರ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ವಕೀಲರ ಸಮವಸ್ತ್ರದಲ್ಲಿದ್ದ ಕೆಲವರು ಮೂವರು ವಿದ್ಯಾರ್ಥಿಗಳಾದ ಅರ್ಷಿದ್ ಯೂಸಿಫ್, ಇನಾಯತ್ ಅಲ್ತಾಫ್ ಶೇಖ್ ಮತ್ತು ಶೋಕತ್ ಅಹ್ಮದ್ ಗನೈ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಗ್ರಾದ ರಾಜಾ ಬಲ್ವಂತ್ ಸಿಂಗ್ ಇಂಜಿನಿಯರಿಂಗ್ ಟೆಕ್ನಿಕಲ್ ಕ್ಯಾಂಪಸ್ ಚಿಚ್ ಪುರಿ ವಿದ್ಯಾರ್ಥಿಗಳನ್ನು ಟಿ 20 ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಗೆಲುವನ್ನು ಸಂಭ್ರಮಾಚರಣೆ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿ ಸಂಘಟನೆಗಳು ಮಾನವೀಯ ಆಧಾರದಲ್ಲಿ ಬಂಧಿತ ವಿದ್ಯಾರ್ಥಿಗಳ ಮೇಲಿನ ದೇಶದ್ರೋಹ ಪ್ರಕರಣವನ್ನು ಕೈಬಿಡಬೇಕೆಂದು ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದೆ.