ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಸ್ವಾಯತ್ತ ಕಾಲೇಜ್ ವಿದ್ಯಾರ್ಥಿ ಸಮರ್ ಎಂಬುವವನನ್ನು ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿದ ಕಾರಣಕ್ಕೆ ಡಿಬಾರ್ ಮಾಡಿರುವುದು ಖಂಡನೀಯ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬನಿಗೂ ಯಾವುದೇ ಸಂಘ, ಸಂಸ್ಥೆಯಲ್ಲಿ ಸೇರುವ ಎಲ್ಲಾ ಅವಕಾಶಗಳನ್ನು ಸಂವಿಧಾನ ನೀಡಿದೆ. ಆದರೆ ವಾಣಿ ವಿದ್ಯಾಸಂಸ್ಥೆಯು ವಿದ್ಯಾರ್ಥಿಯನ್ನು ವೈಯಕ್ತಿಕವಾಗಿ ಗುರಿಪಡಿಸಿಕೊಂಡು ಕಾಲೇಜಿನಿಂದ ಡಿಬಾರ್ ಮಾಡಿದೆ. ಈ ಕುರಿತು ವಿದ್ಯಾರ್ಥಿಯು ಪಿಯು ಬೋರ್ಡ್ನ ಉಪ ನಿರ್ದೇಶಕರನ್ನು ಭೇಟಿಯಾಗಿದ್ದು ಯಾವುದೇ ಪ್ರಯೋಜನವಾಗಲಿಲ್ಲ. ಇದನ್ನು ವಿರೋಧಿಸಿ ನಿನ್ನೆಯ ದಿನವು ಆ ವಿದ್ಯಾರ್ಥಿಯು ಕಾಲೇಜಿನ ಮುಂಭಾಗದಲ್ಲಿ ಒಬ್ಬಂಟಿಯಾಗಿ ನ್ಯಾಯಕ್ಕಾಗಿ ಪ್ರತಿಭಟಿಸಿದ್ದು ಯಾವುದೇ ರೀತಿಯ ಸ್ಪಂದನೆ ಸಿಗಲಿಲ್ಲ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ನಾಯಕರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತ್ರಸ್ತ ವಿದ್ಯಾರ್ಥಿ ಮಹಮ್ಮದ್ ಸಮರ್, ಕ್ಷುಲ್ಲಕ ಕಾರಣಗಳ ನೆಪವೊಡ್ಡಿ ಅನ್ಯಾಯವಾಗಿ ನನ್ನನ್ನು ವೈಯಕ್ತಿಕವಾಗಿ ಗುರಿಪಡಿಸಿ ಡಿಬಾರ್ ಮಾಡಿದ್ದಾರೆ. ಪ್ರಾಂಶುಪಾಲರು ಹೇಳಿಕೆ ನೀಡಿದಂತೆ ನಾನು ಸಾಮಾಜಿಕ ಜಾಲತಾಣಗಳಲ್ಲಿ ಸಂಸ್ಥೆಯ ಅಥವಾ ಪ್ರಿನ್ಸಿಪಾಲರ ಘನತೆಗೆ ಧಕ್ಕೆ ಬರುವಂತಹ ಯಾವುದೇ ಸಂದೇಶವನ್ನು ಅಥವಾ ವೈಯಕ್ತಿಕ ತೇಜೋವಧೆಯನ್ನು ನಾನು ಮಾಡಿಲ್ಲ, ಅದರ ವಿರುದ್ಧ ಸಂಸ್ಥೆಯು ಕಾನೂನು ಹೋರಾಟ ಮಾಡಲಿ ಎಂದರು.
ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸಾದಿಕ್ ಜಾರತ್ತಾರ್ ಮಾತನಾಡಿ, ಈ ಘಟನೆಯು ಸಂಪೂರ್ಣವಾಗಿ ಸಂಘಟನೆಯನ್ನು ವಿರೋಧಿಸಿ ಮತ್ತು ವಿದ್ಯಾರ್ಥಿಯನ್ನು ಗುರಿಪಡಿಸಿ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸಂಬಂದ ಪಟ್ಟ ಇಲಾಖೆಯವರ ಬೇಜವಾಬ್ದಾರಿಯ ಮಾತುಗಳು ಸಂಸ್ಥೆಯ ಕೈಗೊಂಬೆಯಾಗಿ ವರ್ತಿಸುತ್ತಿರುವುದು ಕಂಡುಬರುತ್ತಿದೆ. ತಕ್ಷಣವೇ ಸಂಬಂಧಪಟ್ಟ ಇಲಾಖೆಯು ವಿದ್ಯಾರ್ಥಿಗೆ ನ್ಯಾಯ ಒದಗಿಸಬೇಕು. ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿಗೆ ಬೆಂಬಲವಾಗಿ ನಿಂತು ನ್ಯಾಯ ಸಿಗುವವರೆಗೂ ಎಲ್ಲಾ ರೀತಿಯ ಹೋರಾಟವನ್ನು ನಡೆಸಲಿದೆ. ಮತ್ತು ಸಂಸ್ಥೆಯ ವಿರುದ್ಧ ಕಾನೂನು ಹೋರಾಟ ಮಾಡಲಿದೆ ಅದರ ಜೊತೆಗೆ ಇಲ್ಲಿರುವಂತಹ ಇಲಾಖೆಗಳು ವಿದ್ಯಾರ್ಥಿಗೆ ನ್ಯಾಯ ತೆಗೆದುಕೊಡಲು ವಿಫಲವಾದಲ್ಲಿ ಕಾಲೇಜಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಜಿಲ್ಲಾಧ್ಯಕ್ಷರಾದ ಯಾಸೀನ್ ಬಂಗೇರಕಟ್ಟೆ, ದ.ಕ ಜಿಲ್ಲಾ ಮುಖಂಡ ತಾಜುದ್ದೀನ್ ಪುಂಜಾಲಕಟ್ಟೆ, ಮತ್ತು ಅನ್ಯಾಯಕ್ಕೆ ಒಳಗಾದ ವಿದ್ಯಾರ್ಥಿ ಸಮರ್ ಉಪಸ್ಥಿತರಿದ್ದರು.