2.5 ಕಿ.ಮೀ.ಮುಂದೆ ಸಾಗಿದ್ದ ರೈಲು ತುಂಬು ಗರ್ಭಿಣಿಗಾಗಿ ವಾಪಾಸ್; ಸುರಕ್ಷಿತ ಹೆರಿಗೆ ಮಾಡಿಸಿದ ಸಿಬ್ಬಂದಿ

Prasthutha|

ಟಾಟಾನಗರ : ನಿಲ್ದಾಣದಿಂದ ಹೊರಟು ಸುಮಾರು ಎರಡೂವರೆ ಕಿಲೋಮೀಟರ್ ಮುಂದೆ ಸಾಗಿದ್ದಾಗ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ರೈಲನ್ನು 2.5 ಕಿ.ಮೀ. ವಾಪಸ್ ಕರೆಸಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿರುವ ಘಟನೆ ಜಾರ್ಖಂಡ್ ನ ಟಾಟಾನಗರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

- Advertisement -


ಹೆರಿಗೆ ಮಾಡಿಸಿದ ತಾಯಿ, ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರಾಣು ದಾಸ್ ಎಂಬ ಮಹಿಳೆ ಒಡಿಶಾಗೆ ಹೋಗಲು ಸಂಪರ್ಕ್ ಕ್ರಾಂತಿ ಎಕ್ಸ್ ಪ್ರೆಸ್ ರೈಲಿನ ಎಸ್ 5 ಕೋಚ್ ಹತ್ತಿದ್ದರು. ದೆಹಲಿಯಿಂದ ಹೊರಟ ರೈಲು ನಿನ್ನೆ ಮುಂಜಾನೆ 3.55ಕ್ಕೆ ಜೆಮ್ ಶೆಡ್ ಪುರ ಬಳಿಯ ಟಾಟಾನಗರ ನಿಲ್ದಾಣ ತಲುಪಿದೆ. ಬೆಳಗ್ಗೆ 4.10ಕ್ಕೆ ಈ ನಿಲ್ದಾಣದಿಂದ ಎರಡೂವರೆ ಕಿಲೋ ಮೀಟರ್ ಮುಂದೆ ಸಾಗುವಷ್ಟರಲ್ಲಿ ರಾಣು ದಾಸ್ ಗೆ ಹೆರಿಗೆ ನೋವು ಆರಂಭಗೊಂಡಿದೆ.


ಕೂಡಲೇ ಆಕೆಯ ಕುಟುಂಬಸ್ಥರು ರೈಲಿನ ತುರ್ತು ಚೈನ್ ಎಳೆದು ರೈಲು ನಿಲ್ಲಿಸಿದ್ದಾರೆ. ಬಳಿಕ ಆಕೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ರೈಲು ನಿಂತಿರುವುದನ್ನು ತಿಳಿದ ಆರ್ ಪಿಎಫ್ ಸಿಬ್ಬಂದಿ, ಟಾಟಾನಗರ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಟಾಟಾ ನಗರ ರೈಲು ನಿಲ್ದಾಣವನ್ನು ದಾಟಿ ಎರಡೂವರೆ ಕಿಲೋಮೀಟರ್ ದೂರದಲ್ಲಿ ನಿಂತಿದ್ದ ರೈಲು ಮುಂದಿನ ನಿಲ್ದಾಣ ಹಿಜ್ಲಿ (150 ಕಿ.ಮೀ) ತಲುಪಲು ಕನಿಷ್ಠ ಎರಡೂವರೆ ಗಂಟೆ ಬೇಕಾಗಿತ್ತು. ಮಹಿಳೆಯ ಪರಿಸ್ಥಿತಿ ಅರ್ಥ ಮಾಡಿಕೊಂಡ ಅಧಿಕಾರಿಗಳು ಕ್ರಾಂತಿ ಎಕ್ಸ್ ಪ್ರೆಸ್ ರೈಲನ್ನು ಟಾಟಾನಗರ ನಿಲ್ದಾಣಕ್ಕೆ ಮತ್ತೆ ವಾಪಸ್ ಕರೆಸಿದ್ದಾರೆ.
ಅಲ್ಲಿಂದ ಆ್ಯಂಬುಲೆನ್ಸ್ ಮೂಲಕ ತಾಯಿ, ಮಗುವನ್ನು ಖಾಸ್ಮಹಲ್ ಸರ್ದಾರ್ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿಂದ ಮಗುವನ್ನು ಎಂಜಿಎಂ ಆಸ್ಪತ್ರೆಗೆ ಕಳುಹಿಸಲಾಗಿದೆ. ಸದ್ಯ ಇಬ್ಬರೂ ಸುರಕ್ಷಿತವಾಗಿದ್ದಾರೆ. ಘಟನೆಯಿಂದ ರೈಲು ಸಂಚಾರ ಒಂದು ಗಂಟೆ ತಡವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



Join Whatsapp