ನವದೆಹಲಿ: ಇಸ್ರೇಲ್ ಮೂಲದ ಸ್ಪೈವೇರ್ ಪೆಗಾಸೆಸ್ ಮೂಲಕ ಕೆಲವು ಗಣ್ಯ ವ್ಯಕ್ತಿಗಳ ಮೇಲೆ ಕಣ್ಗಾವಲು ನಡೆಸಿದ ಪ್ರಕರಣ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಗೊಳಿಸುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ.
ಪೆಗಾಸೆಸ್ ಆರೋಪದ ಕುರಿತು ತನಿಖೆ ನಡೆಸಲು ಸುಪ್ರೀಮ್ ಕೋರ್ಟ್ ಸೈಬರ್ ತಜ್ಞರ ತ್ರಿಸದಸ್ಯ ಸಮಿತಿಯನ್ನು ನೇಮಕ ಮಾಡಿರುವುದು ‘ಉತ್ತಮ ನಡೆ’ ಎಂದು ಬಣ್ಣಿಸಿರುವ ರಾಹುಲ್ ಗಾಂಧಿ, ಪೆಗಾಸೆಸ್ ಪ್ರಕರಣ ಸತ್ಯಾಸತ್ಯತೆ ಬಹಿರಂಗವಾಗುವ ವಿಶ್ವಾಸವಿದೆ ಎಂದು ತಿಳಿಸಿದರು.
ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪೆಗಾಸೆಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಧಾನಿ ಅಥವಾ ಗೃಹ ಸಚಿವರು ಮಾತ್ರ ಪೆಗಾಸೆಸ್ ಸ್ಪೈವೇರ್ ಬಳಕೆಗೆ ಆದೇಶ ನೀಡಬಹುದಿತ್ತು ಎಂದು ಆರೋಪಿಸಿದರು.
ಕಳೆದ ಸಂಸತ್ ಅಧಿವೇಶನದಲ್ಲಿ ಪ್ರತಿಪಕ್ಷಗಳು ಈ ವಿಷಯವನ್ನು ಮುಂದಿಟ್ಟುಕೊಂಡು ತನಿಖೆಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಕಲಾಪ ಸ್ಥಗಿತಗೊಂಡಿದ್ದವು ಎಂದು ಈ ಸಂದರ್ಭದಲ್ಲಿ ರಾಹುಲ್ ನೆನಪಿಸಿದರು.
ಪ್ರಸಕ್ತ ಪೆಗಾಸೆಸ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಖ್ಯಾತ ತಜ್ಞರಾದ ನವೀನ್ ಕುಮಾರ್ ಚೌಧರಿ, ಪ್ರಭಾಹರನ್ ಪಿ ಮತ್ತು ಅಶ್ವಿನ್ ಅನಿಲ್ ಗುಮಾಸ್ತೆ ಎಂಬ ಮೂರು ಸದಸ್ಯರ ತಾಂತ್ರಿಕ ಸಮಿತಿಗೆ ವಹಿಸಲಾಗಿದ್ದು, ಈ ಸಮಿತಿ ತನಿಖೆ ನಡೆಸಿ ನ್ಯಾಯಮೂರ್ತಿ ರವೀಂದ್ರನ್ ಅವರಿಗೆ ವರದಿ ಸಲ್ಲಿಸುತ್ತಾರೆ.