ಅಮೃತಸರ: ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಲು ನವೆಂಬರ್ 8 ರಂದು ಪಂಜಾಬ್ ಸರ್ಕಾರ ವಿಧಾನಸಭೆಯ ವಿಶೇಷ ಅಧಿವೇಶನ ಕರೆದಿದೆ ಎಂದು ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಮಂಗಳವಾರ ಸುದ್ಧಿಗಾರರಿಗೆ ತಿಳಿಸಿದರು.
ಪ್ರಸಕ್ತ ಈ ವಿಶೇಷ ಅಧಿವೇಶನಕ್ಕೆ ಮೊದಲು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಒಂದು ವೇಳೆ ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ರದ್ದುಗೊಳಿಸದಿದ್ದಲ್ಲಿ, ನವೆಂಬರ್ 8 ರ ವಿಶೇಷ ಅಧಿವೇಶನದಲ್ಲಿ ಪಂಜಾಬ್ ಸರ್ಕಾರ ಕಾಯ್ದೆಯ ವಿರುದ್ಧ ನಿರ್ಣಯ ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಒಂದು ವರ್ಷಗಳಿಂದ ದೇಶದ ರೈತಾಪಿವರ್ಗ ಆಂದೋಲನ ನಡೆಸುತ್ತಿದೆ.