ದುಬೈ: ಪಾಕಿಸ್ತಾನ ವಿರುದ್ಧದ ಟಿ-20 ವಿಶ್ವಕಪ್ 2021ರ ಪಂದ್ಯದಲ್ಲಿ ಭಾರತ ಸೋತ ನಂತರ ವೇಗಿ ಮುಹಮ್ಮದ್ ಶಮಿ ಕೆಲವರಿಂದ ನಿಂದನೆಗೆ ಒಳಗಾಗಿದ್ದಾರೆ. ಇದೇ ವೇಳೆ, ಭಾರತ ತಂಡದ ಮಾಜಿ, ಹಾಲಿ ಕ್ರಿಕೆಟಿಗರು, ಅಭಿಮಾನಿಗಳು ಸೇರಿದಂತೆ ಅನೇಕರು ಶಮಿ ಪರ ನಿಂತಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಶಮಿ ಪರವಾಗಿರುವ ಹಳೆಯ ವೀಡಿಯೋ ಹರಿದಾಡುತ್ತಿದೆ.
2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೋಲನ್ನು ಕಂಡಿತ್ತು. ಲಂಡನ್ ನ ಓವಲ್ ನಲ್ಲಿ ನಡೆದ ಪಂದ್ಯ ಮುಗಿಸಿ ಭಾರತೀಯ ಆಟಗಾರರು ಡ್ರೆಸ್ಸಿಂಗ್ ರೂಂಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಪಾಕ್ ಅಭಿಮಾನಿಯೊಬ್ಬ ‘ಬಾಪ್ ಕೌನ್ ಹೈ, ಬಾಪ್ ಕೌನ್ ಹೈ ’ ಎಂದು ಪದೇ ಪದೇ ಹೇಳುತ್ತಿದ್ದ. ಇದನ್ನು ಗಮನಿಸಿದ ಶಮಿ ಆತನಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಲು ಏಕಾಂಗಿಯಾಗಿ ಆಗಮಿಸಿದ್ದರು. ಆಗ ಎಂ.ಎಸ್.ಧೋನಿ ಮಧ್ಯಪ್ರವೇಶಿಸಿ ಶಮಿರವರನ್ನು ಶಾಂತವಾಗಿಸಿ ಡ್ರೆಸ್ಸಿಂಗ್ ರೂಂನತ್ತ ಕರೆದುಕೊಂಡು ಹೋದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.