ಬೆಂಗಳೂರು : ಇಡೀ ದೇಶದಲ್ಲಿಯೇ ಅತ್ಯಂತ ವಿನೂತನ ರೀತಿಯಲ್ಲಿ 150 ಸರ್ಕಾರಿ ಐಟಿಐಗಳನ್ನು ಮೇಲ್ದರ್ಜೇಗೇರಿಸುವ ಪ್ರಕ್ರಿಯೆ ತೀವ್ರಗತಿಯಲ್ಲಿ ಸಾಗುತ್ತಿದ್ದು, ಅತ್ಯಾಧುನಿಕ ಕೋರ್ಸ್ ಗಳನ್ನು ಅಳವಡಿಸಲಾಗುತ್ತಿದೆ. ಆದರೆ ಈ ಕ್ರಾಂತಿಕಾರ ಯೋಜನೆಗೆ ವಿದ್ಯಾರ್ಥಿ ಸಮುದಾಯದಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಕಳವಳಕ್ಕೆ ಕಾರಣವಾಗಿದೆ.
ನವೆಂಬರ್ 1 ರಂದು 150 ಸರ್ಕಾರಿ ಐಟಿಐಗಳಲ್ಲಿ ದೀರ್ಘಾವಧಿ ಅಂದರೆ ಒಂದು ಮತ್ತು ಎರಡು ವರ್ಷಗಳ 6 ಕೋರ್ಸ್ ಗಳು ಆರಂಭವಾಗುತ್ತಿವೆ. ಅತ್ಯಾಧುನಿಕ 11 ದೀರ್ಘಾವಧಿಯ ಮತ್ತು 23 ಅಲ್ಪಾವಧಿ ಕೋರ್ಸ್ ಗಳನ್ನು ಪರಿಚಯಿಸಲಾಗುತ್ತಿದೆ. ಇದಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿದ್ದು, ನವೆಂಬರ್ 1 ರ ಕೊಡುಗೆಯಾಗಿ ಇದನ್ನು ರಾಷ್ಟ್ರ ಮಟ್ಟದ ಕಾರ್ಯಕ್ರಮವನ್ನಾಗಿ ಮಾಡಲು ನಿರ್ಧರಿಸಲಾಗಿದೆ. ರತನ್ ಟಾಟಾ ಸೇರಿದಂತೆ ಕೇಂದ್ರ ಸರ್ಕಾರದ ಪ್ರಮುಖ ಗಣ್ಯರು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಟಾಟಾ ಟೆಕ್ನಾಲಜಿಸ್ ಹಾಗೂ ಇತರೆ 20 ಉದ್ಯಮಗಳೊಂದಿಗೆ ಸೇರಿ ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ “ಉದ್ಯೋಗ” ಯೋಜನೆ ಜಾರಿಗೆ ತಳಮಟ್ಟದ ಸಿದ್ಧತೆಗಳು ಪೂರ್ಣಗೊಂಡಿವೆ. ಉದ್ಯೋಗ ಯೋಜನೆ ಕುರಿತು ಇತರೆ ರಾಜ್ಯಗಳಲ್ಲೂ ವ್ಯಾಪಕ ಚರ್ಚೆಯಾಗುತ್ತಿದೆ. ತಮಿಳುನಾಡಿನ ಅಧಿಕಾರಿಗಳ ತಂಡ ಸರ್ಕಾರಿ ಐಟಿಐಗಳನ್ನು ಮೇಲ್ದರ್ಜೇಗೇರಿಸುತ್ತಿರುವ ಪ್ರಕ್ರಿಯೆ ಬಗ್ಗೆ ಈಗಾಗಲೇ ರಾಜ್ಯದಲ್ಲಿ ಅಧ್ಯಯನ ಮಾಡಿದೆ. ಇನ್ನೂ ಹಲವು ರಾಜ್ಯಗಳು ಸಹ ಟಾಟಾ ಸಂಸ್ಥೆಯ ಜತೆ ನಮ್ಮ ರಾಜ್ಯದಲ್ಲೂ ಇದೇ ರೀತಿಯ ವೃತ್ತಿ ತರಬೇತಿ ಕೋರ್ಸ್ ಗಳನ್ನು ತೆರೆಯಲು ಸಹಕಾರ ನೀಡುವಂತೆ ಕೋರಿದೆ.
ನವೆಂಬರ್ 1 ರಂದು ಬ್ಯಾಟರಿ ಚಾಲಿತ ವಾಹನಗಳು, ಇಂಟರ್ನೆಟ್ ಆಫ್ ಥಿಂಗ್ಸ್, ಕೈಗಾರಿಕ ರೊಬೊಟಿಕ್ಸ್, ಡಿಜಿಟಲ್ ಉತ್ಪಾದನೆಯಂತಹ ಆರು ಕೋರ್ಸ್ ಗಳನ್ನು ಆರಂಭಿಸುತ್ತಿದೆ. ಪ್ರವೇಶ ಪ್ರಕ್ರಿಯೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಅ. 25 ರಿಂದ ಅಕ್ಟೋಬರ್ ಅಂತ್ಯದವರೆಗೆ ವಿಸ್ತರಿಸಲಾಗಿದೆ.
ವೃತ್ತಿ ತರಬೇತಿ ವಲಯದಲ್ಲಿ ಇದೊಂದು ಮಹತ್ವದ ಮತ್ತು ಕ್ರಾಂತಿಕಾರಕ ಹೆಜ್ಜೆಯಾಗಿದ್ದು, ಯುವ ಸಮೂಹಕ್ಕೆ ಉದ್ಯೋಗ ದೊರಕಿಸಿಕೊಡಲು ಮತ್ತು ಕೈಗಾರಿಕಾ ವಲಯಕ್ಕೆ ಅಗತ್ಯವಾಗಿರುವ ನುರಿತ ಮಾನವ ಸಂಪನ್ಮೂಲ ಒದಗಿಸಲು ಸರ್ಕಾರಿ ಐಟಿಐಗಳು ಮೇಲ್ದರ್ಜೆಗೇರುತ್ತಿವೆ. ಇದೇ ಮೊದಲ ಬಾರಿಗೆ ಟಾಟಾ ಟೆಕ್ನಾಲಜಿಸ್ ಸಹಯೋಗದೊಂದಿಗೆ 150 ಸರ್ಕಾರಿ ಐಟಿಐಗಳನ್ನು ಸರಾಸರಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ಉನ್ನತೀಕರಣಗೊಳಿಸಲಾಗುತ್ತಿದೆ. ಆಧುನಿಕ ಕೋರ್ಸ್ ಗಳು, ಅತ್ಯಾಧುನಿಕ ತಂತ್ರಜ್ಞಾನ, ನುರಿತ ತರಬೇತುದಾರರು ಈ ಐಟಿಐಗಳ ಮೆರುಗು ಹೆಚ್ಚಿಸಲು ಸಜ್ಜಾಗಿದ್ದಾರೆ.
ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಅತಿ ಹೆಚ್ಚು ಅಂದರೆ 9 ಸರ್ಕಾರಿ ಐಟಿಐಗಳು ಉನ್ನತೀಕರಣಗೊಳ್ಳುತ್ತಿವೆ. ಹೊಸ ಜಿಲ್ಲೆಯಾಗಿ ಹುಟ್ಟಿಕೊಂಡಿರುವ ವಿಜಯನಗರ ಜಿಲ್ಲೆಯ ಮೂರು ಐಟಿಐಗಳಿಗೆ ಸಹ ಕಾಯಕಲ್ಪ ಕಲ್ಪಿಸಲಾಗುತ್ತಿದೆ. ಮೈಸೂರಿನ 8 ಐಟಿಐಗಳು, ಕೊಡಗು, ಯಾದಗಿರಿ ಜಿಲ್ಲೆಗಳ ತಲಾ ಎರಡು ಸರ್ಕಾರಿ ಐಟಿಐಗಳು ಉನ್ನತೀಕರಣಗೊಳ್ಳುತ್ತಿವೆ. ಹೊಸ ತಂತ್ರಜ್ಞಾನ ಹಂಚಿಕೆಯಲ್ಲಿ ಎಲ್ಲಾ ಪ್ರದೇಶಗಳಿಗೂ ನ್ಯಾಯ ಒದಗಿಸಲಾಗಿದೆ. ಮುಂಬೈ ಕರ್ನಾಟಕ ಸೇರಿ ರಾಜ್ಯದ ಎಲ್ಲಾ ಭಾಗಗಳು, ಎಲ್ಲಾ ಜಿಲ್ಲೆಗಳಲ್ಲೂ ಐಟಿಐಗಳು ಜೀವಕಳೆ ತುಂಬಿಕೊಂಡು ವೃತ್ತಿ ತರಬೇತಿಯಲ್ಲಿ ಹೊಸ ಭಾಷ್ಯ ಬರೆಯಲು ಸಜ್ಜಾಗಿದ್ದು, ಇಲ್ಲಿ ಪ್ರಾದೇಶಿಕ ಪ್ರಾತಿನಿಧ್ಯ ಕಲ್ಪಿಸಲು ವಿಶೇಷ ಒತ್ತು ನೀಡಲಾಗಿದೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಉದ್ಯೋಗ ಯೋಜನೆಯಡಿ ವೃತ್ತಿ ತರಬೇತಿ ನೀಡಲಾಗುತ್ತಿದೆ. 4.0 ತಲೆಮಾರಿನ ಕೈಗಾರಿಕೆಗಳ ತಂತ್ರಜ್ಞಾನಕ್ಕೆ ಅನುಗುಣವಾಗಿ ತರಬೇತಿ ಕಲ್ಪಿಸಲು ಹಾಗೂ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಐಟಿಐಗಳು ಸನ್ನದ್ಧಗೊಂಡಿವೆ.
ಇಲ್ಲಿ ಪ್ರವೇಶ ಪಡೆಯಲು ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು. ಎಸ್.ಎಸ್.ಎಲ್.ಸಿ ನಂತರ ಯಾವ ಕೋರ್ಸ್ ಗಳಿಗೆ ಸೇರಬೇಕು ಎನ್ನುವ ಅಂತಕ ಅಥವಾ ಗೊಂದಲದಲ್ಲಿರುವವರಿಗೆ ಈ ಐಟಿಐ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ಉತ್ತಮ ಅವಕಾಶಗಳಿವೆ.
ರಾಜ್ಯದ ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯ ಉದ್ಯೋಗ ಯೋಜನೆಯಡಿ ಖಾಸಗಿ ಪಾಲುದಾರಿಕೆಯ ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಮತ್ತು ಇತರೆ 20 ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಸರ್ಕಾರಿ ಐಟಿಐಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ವೃತ್ತಿ ಶಿಕ್ಷಣದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಖಾಸಗಿ ಪಾಲುದಾರಿಕೆ ಯೋಜನೆ ಜಾರಿಯಾಗುತ್ತಿರುವುದು ಇದೇ ಮೊದಲು. ಈ ಯೋಜನೆಯ ಒಟ್ಟಾರೆ ಅಂದಾಜು ವೆಚ್ಚ 4 ಸಾವಿರದ 636 ಕೋಟಿ ರೂಪಾಯಿ. ರಾಜ್ಯ ಸರ್ಕಾರ 657 ಕೋಟಿ ರೂಪಾಯಿ ಒದಗಿಸುತ್ತಿದ್ದು, ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಹಾಗೂ ಇತರೇ ಉದ್ಯಮ ಪಾಲುದಾರರು 4 ಸಾವಿರದ 80 ಕೋಟಿ ರೂಪಾಯಿಗಳ ವೆಚ್ಚದ ಯೋಜನೆ ರೂಪಿಸಲಾಗಿದೆ.ಭವಿಷ್ಯದ 4.0 ಹಂತದ ತಲೆಮಾರಿನ ಕೈಗಾರಿಕೆಗಳ ಅಗತ್ಯಕ್ಕೆ ಅನುಗುಣವಾಗಿ ನೈಪುಣ್ಯತೆ ಹೊಂದಿದ ಕಾರ್ಮಿಕರನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.
ಸರ್ಕಾರ ಮತ್ತು ಖಾಸಗಿ ವಲಯದ ಒಪ್ಪಂದದಂತೆ ಸರ್ಕಾರಿ ಐ.ಟಿ.ಐ.ಗಳಲ್ಲಿ ಕಟ್ಟಡ, ಮೂಲ ಸೌಕರ್ಯ ಸುಧಾರಣೆ ಮಾಡುತ್ತಿದ್ದು, ಐಟಿಐಗಳ ಭೌತಿಕ ಸ್ವರೂಪವೇ ಬದಲಾಗಲಿದೆ. ಸರ್ಕಾರಿ ಐಟಿಐಗಳಲ್ಲಿ 150 ನವೀನ ಕಾರ್ಯಾಗಾರಗಳು,72 ಹೊಸ ತಂತ್ರಜ್ಞಾನ ಪ್ರಯೋಗಶಾಲೆಗಳನ್ನು ನಿರ್ಮಿಸಿ 78 ಪ್ರಯೋಗಶಾಲೆಗಳನ್ನು ಸಹ ಉನ್ನತೀಕರಣಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ತರಬೇತಿ ಹಾಗೂ ಉದ್ಯಮ ಕೇಂದ್ರಿತ ಪಠ್ಯಕ್ರಮ ಅಡಕಗೊಳಿಸಲಾಗುತ್ತಿದೆ.
ಪಾಲಿಟೆಕ್ನಿಕ್ ಗಳು ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಐದು ವರ್ಷಗಳವರೆಗೆ ವಿಸ್ಯಾಟ್ ತಂತ್ರಜ್ಞಾನದ ಮೂಲಕ ವಿಶಿಷ್ಟ ವಿದ್ಯುನ್ಮಾನ ಕಲಿಕಾವೇದಿಕೆ. ಅತ್ಯಾಧುನಿಕ ಉಪಕರಣಗಳು ಹಾಗೂ ಜಾಗತಿಕ ಮಟ್ಟದ ಮೂಲ ಉಪಕರಣಗಳನ್ನು ಸಹ ಒದಗಿಸುತ್ತಿರುವುದು ವಿಶೇಷವಾಗಿದೆ. ತಂತ್ರಾಂಶಗಳ ಉತ್ಕಷ್ಟ ತರಬೇತಿ ಖಚಿತಪಡಿಸುವ ಸಲುವಾಗಿ ಮೂರು ವರ್ಷಗಳವರೆಗೆ ಐ.ಟಿ.ಐ. ತರಬೇತುದಾರರಿಗೆ ಉದ್ಯಮ ವಿಷಯಗಳಲ್ಲಿ ತಜ್ಞರಿಂದ ತರಬೇತಿ ಸಹ ಒದಗಿಸಲಾಗುತ್ತಿದೆ.
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಹಾಗೂ ಬೃಹತ್ ಕೈಗಾರಿಕೆಗಳೊಂದಿಗೆ ಆವಿಷ್ಕಾರ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಳ್ಳಲು ತಂತ್ರಜ್ಞಾನ ಚಟುವಟಿಕಾ ಕೇಂದ್ರಗಳನ್ನೂ ಸಹ ಪ್ರಾರಂಭ ಮಾಡಲಾಗುತ್ತಿದೆ. ಉದ್ಯೋಗಾವಕಾಶಗಳ ಲಭ್ಯತೆ ಹೆಚ್ಚಿಸಲು ಶಿಕ್ಷಣ ಕ್ರಮ ಹಾಗೂ ಕೈಗಾರಿಕೆಗಳ ಸಂಪರ್ಕಕ್ಕೂ ಅವಕಾಶ ನೀಡುತ್ತಿರುವುದು “ ಉದ್ಯೋಗ “ ಯೋಜನೆಯ ಮತ್ತೊಂದು ಆಯಾಮವಾಗಿದೆ.
ತಲಾ ಒಂದು ವರ್ಷದ ಕಂಪ್ಯೂಟರ್ ಏಯ್ಡೆಡ್ ಮ್ಯಾನುಫೆಕ್ಚರಿಂಗ್, ಮ್ಯಾನುಫೆಕ್ಚರಿಂಗ್ ಪ್ರೋಸಸ್ ಕಂಟ್ರೋಲ್ ಅಂಡ್ ಆಟೋಮೇಷನ್, ಬೇಸಿಕೆ ಡಿಸೈನ್ ಅಂಡ್ ಅಡಿಟಿವ್ ಮ್ಯಾನುಪೆಕ್ಚರಿಂಗ್, ಇಂಡಸ್ಟ್ರಿಯಲ್ ರೊಬೊಟಿಕ್ ಆ್ಯಂಡ್ ಡಿಜಿಟಲ್ ಮ್ಯಾನುಪೆಕ್ಚರಿಂಗ್, ಅಡ್ವಾನ್ಸ್ ಫ್ಲೆಂಬಿಂಗ್, ಆರ್ಟಿಸಾನ್ ಯೂಸಿಂಗ್ ಅಡ್ವಾನ್ಸ್ ಡ್ ಟೂಲ್ಸ್ ಕೋರ್ಸ್ ಗಳಿವೆ.
ಎರಡು ವರ್ಷದ ದೀರ್ಘಾವಧಿ ಕೋರ್ಸ್ ಗಳೆಂದರೆ ಅಡ್ವಾನ್ಸ್ ಡ್ ಆಟೋಮೊಬೈಲ್ ಇಂಜಿನಿಯರಿಂಗ್, ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್, ಬೇಸಿಕ್ ಡಿಸೈನ್ ಅಂಡ್ ವರ್ಚುವಲ್ ವೆರಿಫಿಕೇಶನ್, ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಅಡ್ವಾನ್ಸ್ ಡ್ ಮ್ಯಾನುಪೆಕ್ಚರಿಂಗ್ ಕೋರ್ಸ್ ಗಳನ್ನು ಆರಂಭಿಸಲಾಗುತ್ತಿದೆ.
ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ ನಿಪುಣ ಕಾರ್ಮಿಕ ಸಂಪನ್ಮೂಲ ಒದಗಿಸಲು ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ “ ಉದ್ಯೋಗ “ ಎಂಬ ವಿನೂತನ ಯೋಜನೆ ಜಾರಿಗೆ ತಂದಿದೆ. ವೃತ್ತಿ ತರಬೇತಿ ಕ್ಷೇತ್ರದಲ್ಲಿ ಇದು ಹೊಸ ಆಯಾಮ ಸೃಷ್ಟಿಸುವ ಜತೆಗೆ ಉದ್ಯೋಗ ಸೃಷ್ಟಿಗೆ ಹೊಸ ಅವಕಾಶದ ಬಾಗಿಲನ್ನೇ ತೆರೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 080 – 25189105
ಇ ಮೇಲ್ ವಿಳಾಸ ; www.udyoga.karnataka.gov.in