ಚಿಗುರು ಮೀಸೆ ಬಾಲಕನ ಮೋಹಕ್ಕೆ ಎರಡು ಮಕ್ಕಳ ತಾಯಿ ದುರಂತ ಸಾವು !

Prasthutha|

ಬೆಂಗಳೂರು: ಚಿಗುರು ಮೀಸೆಯ ಬಾಲಕನ ಮೋಹಕ್ಕೆ ಒಳಗಾಗಿ‌ ಆತನ‌ ಜೊತೆ ಸಂಸಾರ ನಡೆಸಲು ಮುಂದಾಗಿರುವುದೇ   ಬನಶಂಕರಿ ಯಾರಬ್​ ನಗರದಲ್ಲಿ ನಡೆದ ಒಂಟಿ ಮಹಿಳೆಯ ಕೊಲೆಗೆ ಕಾರಣವಾಗಿದೆ.

- Advertisement -

ಬನಶಂಕರಿಯ ಸುತ್ತಮುತ್ತಲಿನ ಜನತೆಯನ್ನು ಬೆಚ್ಚಿ ಬೀಳಿಸಿದ್ದ ಒಂಟಿ ಮಹಿಳೆಯ ಬರ್ಬರ ಹತ್ಯೆ ಪ್ರಕರಣ ಸಂಬಂಧ ತನಿಖೆ ಕೈಗೊಂಡ ಕೆಲವೇ ಗಂಟೆಗಳಲ್ಲಿ ಬನಶಂಕರಿ ಪೊಲೀಸರು ಹಂತಕ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ. ಯಾರಬ್ ನಗರದ ಮನೆಯೊಂದರಲ್ಲಿ ಅ.20ರ ಸಂಜೆ ಅಪ್ರೀನ್ ಖಾನಂ(28) ಕೊಲೆಯಾಗಿ ನಿನ್ನೆ ಬೆಳಿಗ್ಗೆ  ಬೆಳಕಿಗೆ ಬಂದಿತ್ತು. ಮೆಲ್ನೋಟಕ್ಕೆ ಮಹಿಳೆಯ ಕೊಲೆಯನ್ನು ಪತಿಯೇ ಮಾಡಿರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಶಂಕೆ ವ್ಯಕ್ತಪಡಿಸಿದ್ದರು‌‌.

ಈ ಸಂಬಂಧ ವಿಚಾರಣೆ ನಡೆಸಿದ್ದ ಇನ್ಸ್​ಪೆಕ್ಟರ್ ಪುಟ್ಟಸ್ವಾಮಿ ನೇತೃತ್ವದ ತಂಡ ಮಹಿಳೆಯ ಪತಿ ಹಾಗೂ ಸಂಬಂಧಿಕರನ್ನು ಪ್ರಶ್ನಿಸಿದಾಗ ಹತ್ಯೆಗೆ ಪತಿಯಲ್ಲ,ಪತಿಯ ಅಕ್ಕನ‌ ಮಗನೇ ಕಾರಣ ಎಂಬುದನ್ನು ಪತ್ತೆ ಹಚ್ಚಿ ಬಂಧಿಸಿದೆ.

- Advertisement -

ಮಹಿಳೆಯ ಸಂಬಂಧಿಕನಾಗಿದ್ದ 17 ವರ್ಷದ ಬಾಲಾಪರಾಧಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಣನಕುಂಟೆಯಲ್ಲಿ ವಾಸವಾಗಿದ್ದ ಬಾಲಕ‌, ಖಾಸಗಿ ಕಾಲೇಜಿನಲ್ಲಿ ಮೊದಲ ಪಿಯು ವ್ಯಾಸಂಗ ಮಾಡುತ್ತಿದ್ದ.

ಘಟನೆ ಹಿನ್ನೆಲೆ:

ಯಾರಬ್ ನಗರದಲ್ಲಿ ನಾಲ್ಕು ವರ್ಷಗಳಿಂದ ಮೃತ ಮಹಿಳೆ ಅಪ್ರೀನ್ ಖಾನಂ ಪತಿ ಲಾಲು ಜೊತೆ ವಾಸವಾಗಿದ್ದರು. ಪತಿ ಟಿಂಬರ್ ಯಾರ್ಡ್​ನಲ್ಲಿ ಕೆಲಸ‌ ಮಾಡುತ್ತಿದ್ದ‌. ಇವರು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದು ದಂಪತಿಗೆ ಇಬ್ಬರು‌ ಮಕ್ಕಳಿದ್ದಾರೆ. ಕಳೆದ‌‌ ಆರು ತಿಂಗಳಿಂದ ಕೌಟುಂಬಿಕ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಗುತಿತ್ತು. ಪತ್ನಿಯು ಬೇರೆಯವರೊಂದಿಗೆ ಸಂಬಂಧ ಹೊಂದಿರುವುದಾಗಿ ಪತಿ ಗಲಾಟೆ ಮಾಡುತ್ತಿದ್ದ. ಇದೇ ವಿಚಾರವಾಗಿ ಎರಡು ದಿನಗಳ ಹಿಂದೆ ಇಬ್ಬರು ನಡುವೆ ಜಗಳವಾಗಿತ್ತು.

ಒಂಟಿಯಾಗಿದ್ದಾಗ ಕೃತ್ಯ:

ಮೊಮ್ಮಕ್ಕಳನ್ನು ಕರೆದುಕೊಂಡು ಹೋಗುವಂತೆ ಪತ್ನಿಯ ತಾಯಿಗೆ ಲಾಲು ಸೂಚಿಸಿ ಕೆಲಸಕ್ಕೆ ಹೋಗಿದ್ದ. ಯಾರೂ ಇಲ್ಲದಿರುವುದನ್ನು ಮನಗಂಡಿದ್ದ ಸಂಬಂಧಿಕನಾಗಿದ್ದ ಬಾಲಕ‌ ಮಹಿಳೆ ಮನೆಗೆ ಬಂದಿದ್ದ. ಕಳೆದ ಆರು ತಿಂಗಳಿಂದ ಇಬ್ಬರ ನಡುವೆ ಅನೈತಿಕ ಸಂಬಂಧವಿತ್ತು.

ಪತಿಯ ಕಿರುಕುಳ ತಾಳಲಾರದೆ ಬಾಲಕನಿಗೆ ಎಲ್ಲಾದರೂ ದೂರ ಹೋಗೋಣ ಎಂದು ಮಹಿಳೆ ಹೇಳುತ್ತಿದ್ದಳಂತೆ. ಇದಕ್ಕೆ ಬಾಲಕ ವಿರೋಧ ವ್ಯಕ್ತಪಡಿಸಿದ್ದ. ಅಂದು ಮಧ್ಯಾಹ್ನ ಸಹ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಉಂಟಾದ ಜಗಳ ವಿಕೋಪಕ್ಕೆ ಹೋಗಿದೆ.

ಕೊಲೆಯಲ್ಲಿ ಅಂತ್ಯ;

ಇಬ್ಬರು ಹೊಡೆದಾಡಿಕೊಂಡಿದ್ದು ಆಕ್ರೋಶಗೊಂಡ ಬಾಲಕ‌ ಮನೆಯಲ್ಲಿದ್ದ ಚಾಕು ಹಾಗೂ ಕತ್ತರಿಯಿಂದ ಬಾಲಕ ಮನಬಂದಂತೆ ಚುಚ್ಚಿದ್ದು ತೀವ್ರವಾಗಿ ಗಾಯಗೊಂಡ ಮಹಿಳೆ ಮೃತಪಟ್ಟಿದ್ದಾಳೆ. ಸಹಜ ಸಾವು ಎಂದು ಬಿಂಬಿಸಲು ಬೆಡ್​ಶೀಟ್​ಗೆ ಗ್ಯಾಸ್​ನಿಂದ ಬೆಂಕಿ ಹಚ್ಚಿಸಿಕೊಂಡು, ಹಾಸಿಗೆಗೆ ಬೆಂಕಿ ಹತ್ತಿಸಿದ್ದಾನೆ. ಆತಂಕದಿಂದಲೇ ಮನೆಗೆ ಬೀಗ ಹಾಕಿ ತಪ್ಪಿಸಿಕೊಂಡಿದ್ದಾನೆ. ಹಾಸಿಗೆ ಬೆಂಕಿ ಕಿಡಿ ಸಣ್ಣ ಪ್ರಮಾಣದಲ್ಲಿ ಹೊತ್ತಿಕೊಂಡಿತ್ತು. ಬಳಿಕ ಮನೆಯಿಂದ ಹೊಗೆ ಬರುತ್ತಿರುವುದನ್ನು‌ ಕಂಡು ಸ್ಥಳೀಯರು ಹಾಗೂ ಸಂಬಂಧಿಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.

ಬಾಲಾಪರಾಧಿ ಪತ್ತೆ:

ಕೊಲೆ ಪ್ರಕರಣ ತನಿಖೆ ಕೈಗೊಂಡಿದ್ದ ಇನ್‌ಸ್ಪೆಕ್ಟರ್ ಪುಟ್ಟಸ್ವಾಮಿ ನೇತೃತ್ವದ ತಂಡ ಮಹಿಳೆಯ ಪತಿ ಲಾಲು ಹಾಗೂ ಸಂಬಂಧಿಕರನ್ನು ವಿಚಾರಣೆ ನಡೆಸಿತ್ತು. ಈ ವೇಳೆ ಮೃತ ಮಹಿಳೆಯ ಸಹೋದರಿ ಆಗಾಗ ಬಾಲಕ ಮನೆಗೆ ಬಂದು ಹೋಗುತ್ತಿದ್ದ ಎಂದು ಹೇಳಿಕೆ ನೀಡಿದ್ದರು.ಈ ಸುಳಿವನ್ನು ಆಧರಿಸಿ ಪೊಲೀಸರಿಗೆ ಶಂಕಿತನ ಕರೆ ವಿವರ ಹಾಗೂ ಕೃತ್ಯ ನಡೆಯುವಾಗ ಈತ ಎಲ್ಲಿದ್ದ ಎಂಬ ಬಗ್ಗೆ ತಾಂತ್ರಿಕ ತನಿಖೆ ನಡೆಸಿದಾಗ ಬಾಲಕ ಮೆಲ್ನೋಟಕ್ಕೆ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಅನುಮಾನ ಬಂದಿದೆ.

ಬಳಿಕ ಕೋಣನಕುಂಟೆಯಲ್ಲಿ ವಾಸವಾಗಿದ್ದ ಮನೆಯಲ್ಲಿ ಬಾಲಕನನ್ನ ವಶಕ್ಕೆ‌ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಗ್ಗೆ ಬಾಯ್ಬಿಟ್ಟಿದ್ದಾನೆ‌ ಎಂದು ಪೊಲೀಸರು ತಿಳಿಸಿದ್ದಾರೆ‌.



Join Whatsapp