ಮಂಗಳೂರು: ಎ.ಐ.ಸಿ.ಸಿ.ಕಾರ್ಯದರ್ಶಿ ಐವನ್ ಡಿಸೋಜಾರವರ ಮಂಗಳೂರಿನ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಬಜರಂಗದಳ ಕಾರ್ಯಕರ್ತರ ನಡೆಯು ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟುಸಲು ಮಾಡಿರುವ ಷಡ್ಯಂತ್ರವಾಗಿದ್ದು, ರಾಜ್ಯ ಸರ್ಕಾರವು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಕೆ.ಪಿ.ಸಿ.ಸಿ.ಮಾಧ್ಯಮ ವಕ್ತಾರ ಶೌವಾದ್ ಗೂನಡ್ಕ ಆಗ್ರಹಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವರು ಸೇರಿದಂತೆ ಇಡೀ ಸರ್ಕಾರವೇ ಉಪಚುನಾವಣೆಯನ್ನು ಗೆಲ್ಲುವ ಸಲುವಾಗಿ ಹಾನಗಲ್ ಹಾಗೂ ಸಿಂಧಗಿಯಲ್ಲಿ ಬೀಡು ಬಿಟ್ಟಿದ್ದು, ರಾಜ್ಯದ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ ಎಂದು ಶೌವಾದ್ ಗೂನಡ್ಕ ಆರೋಪಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಘಟನೆಗಳು ರಾಜ್ಯದಲ್ಲಿ ಪದೇ ಪದೇ ನಡೆಯುತ್ತಿದ್ದು, ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಕೇವಲ ಹೇಳಿಕೆಗಳಿಗೆ ಸೀಮಿತರಾಗಿ ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇತ್ತೀಚೆಗೆ ನೀಡಿದ “ಕ್ರಿಯೆ–ಪ್ರತಿಕ್ರಿಯೆ” ಹೇಳಿಕೆಯ ಪ್ರಚೋದನೆಯಿಂದಾಗಿ ಇಂತಹ ಘಟನೆಗಳು ನಡೆಯುತ್ತಿದ್ದು, ಕಾನೂನಿನ ಮೇಲೆ ಯಾವುದೇ ಗೌರವವಿಲ್ಲದೇ ರಾಜ್ಯದ ಪ್ರಮುಖ ನಾಯಕರ ಮನೆಗೆ ಮುತ್ತಿಗೆ ಹಾಕುವುದಾದರೆ ರಾಜ್ಯದಲ್ಲಿ ಸಾಮಾನ್ಯ ಜನರ ಭದ್ರತೆಯ ಗತಿಯೇನು? ಎಂದು ಶೌವಾದ್ ಗೂನಡ್ಕ ಪ್ರಶ್ನಿಸಿದ್ದಾರೆ.