‘ಲಖಿಂಪುರ್ ಪ್ರಕರಣದ ತನಿಖೆ ಎಂದಿಗೂ ಮುಗಿಯದ ಕಥೆಯಾಗಬಾರದು’: ಉ.ಪ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ

Prasthutha|

ಹೊಸದಿಲ್ಲಿ: ಲಖಿಂಪುರ್ ಖೇರಿಯಲ್ಲಿ ನಡೆದ ರೈತರ ಹತ್ಯೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಯೋಗಿ ಸರ್ಕಾರವನ್ನು ಸುಪ್ರೀಂ ಕೋರ್ಟ್ ಕಟುವಾಗಿ ಟೀಕಿಸಿದ್ದು, ಪ್ರಕರಣದ ತನಿಖೆ ಎಂದಿಗೂ ಮುಗಿಯದ ಕಥೆಯಾಗಬಾರದು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ಎಚ್ಚರಿಸಿದೆ.

- Advertisement -

ತನಿಖೆಯನ್ನು ನಿಧಾನಗೊಳಿಸಲು ರಾಜ್ಯ ಪೊಲೀಸರು ಪ್ರಯತ್ನಿಸಬಾರದು ಎಂದು ತ್ರಿಸದಸ್ಯ ಪೀಠವು ಸೂಚಿಸಿದೆ. ಇಂದು ಒಂದು ಗಂಟೆಯವರೆಗೆ ಪ್ರಕರಣದ ನೈಜ ವರದಿಗಾಗಿ ಕಾಯಬೇಕಾಯಿತು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹೇಳಿದರು.

ಉತ್ತರಪ್ರದೇಶ ಪೊಲೀಸರು ತನಿಖೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣದಲ್ಲಿ 44 ಸಾಕ್ಷಿಗಳಿದ್ದಾರೆ. ಈ ಪೈಕಿ ನಾಲ್ವರನ್ನು ಮಾತ್ರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಅವರ ಗೌಪ್ಯ ಹೇಳಿಕೆಗಳನ್ನು ದಾಖಲಿಸಲಾಗಿದೆ. ಉಳಿದವರ ಗೌಪ್ಯ ಹೇಳಿಕೆಯನ್ನು ಏಕೆ ದಾಖಲಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಳಿದೆ.

- Advertisement -

ದಸರಾ ರಜೆಯ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ರಜೆಯಿಂದಾಗಿ ಗೌಪ್ಯ ಹೇಳಿಕೆ ದಾಖಲಿಸಲು ವಿಳಂಬವಾಗಿದೆ ಎಂದು ಉತ್ತರಪ್ರದೇಶ ಸರ್ಕಾರದ ಪರ ವಕೀಲ ಹರೀಶ್ ಸಾಳ್ವೆ ನ್ಯಾಯಾಲಯಕ್ಕೆ ತಿಳಿಸಿದರು. ಮುಂದಿನ ವಾರದೊಳಗೆ ಎಲ್ಲ ಸಾಕ್ಷಿಗಳ ಗೌಪ್ಯ ಹೇಳಿಕೆಗಳನ್ನು ದಾಖಲಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ಸಾಕ್ಷಿದಾರರಿಗೆ ಭದ್ರತೆ ನೀಡಬೇಕು. ತನಿಖೆಯನ್ನು ಅನಿರ್ದಿಷ್ಟವಾಗಿ ವಿಸ್ತರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.



Join Whatsapp