ಭೋಪಾಲ್: ಮಧ್ಯ ಪ್ರದೇಶದ ಬರ್ವಾನಿ ಜಿಲ್ಲೆಯ ಸೆಂಧ್ವಾದಲ್ಲಿ ಗರ್ಭಾ ನೃತ್ಯ ವೇದಿಕೆಗೆ 10 ವರ್ಷ ಪ್ರಾಯದ ಮುಸ್ಲಿಂ ಬಾಲಕನೊಬ್ಬ ಬಂದನೆಂಬ ಕಾರಣಕ್ಕೆ ಸಂಘಪರಿವಾರ ನಡೆಸಿದ ಗಲಭೆಯಿಂದಾಗಿ 24 ಗಂಟೆಗಳ ಕರ್ಫ್ಯೂ ಹೇರಲಾಗಿದ್ದು, 22 ಜನರನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರದ ಗಡಿಯಲ್ಲಿರುವ ಸೆಂಧ್ವಾ, ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಸೆಂಧ್ವಾದ ಮೋತಿ ಬಾಗ್ ಪ್ರದೇಶದಲ್ಲಿನ ಗರ್ಭಾ ನೃತ್ಯ ವೇದಿಕೆಯಲ್ಲಿ 10 ವರ್ಷ ಪ್ರಾಯದ ಬಾಲಕನೊಬ್ಬ ಕಾಣಿಸಿದ್ದರಿಂದ ಹಿಂಸಾಚಾರ ಕಾಣಿಸಿತು ಎಂದು ಬರ್ವಾನಿ ಪೊಲೀಸರು ಹೇಳುತ್ತಾರೆ. ಮುಸ್ಲಿಮ್ ಮತ್ತು ಹಿಂದೂಗಳ ನಡುವೆ ಮಾತು ತಾರಕಕ್ಕೇರಿ, ಹೊಡೆದಾಟ ಉಂಟಾಗಿ, ಕಲ್ಲು ತೂರಾಟ ನಡೆಯಿತು.
“ಹುಡುಗರ ಜಗಳವು ಕೋಮು ಗಲಭೆಯಾಗಿ ಬದಲಾಯಿತು. ಉಭಯ ಕಡೆಯವರು ಪರಸ್ಪರ ಕಲ್ಲು ತೂರಿಕೊಂಡರು. ಮಕ್ಕಳು ಹೆಂಗಸರ ಸಹಿತ 12ಕ್ಕೂ ಅಧಿಕ ಮಂದಿ ಗಾಯಗೊಂಡರು ಎಂದು ಬರ್ವಾನಿ ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ದೀಪಕ್ ಶುಕ್ಲಾ ಹೇಳಿದರು.
ಅಪನಂಬಿಕೆ, ಎರಡೂ ಕಡೆಯಿಂದ ವಾಟ್ಸಪ್ ಗಾಳಿ ಸುದ್ದಿಗಳನ್ನು ಹರಡಿದ್ದರಿಂದ, ದ್ವೇಷ ಜ್ವಾಲೆ ಪ್ರಜ್ವಲಿಸಿ ಎರಡೂ ಕಡೆಯವರು ಎದುರು ಬದುರಾಗಿ ಕಲ್ಲು ತೂರಾಟ ನಡೆಸಿದರು.
ಹಬ್ಬದ ಕಾಲದಲ್ಲಿ ಈ ಘಟನೆಯ ಅಪಾಯವನ್ನು ಗುರುತಿಸಿದ ಆಡಳಿತಾಧಿಕಾರಿಗಳು, ಜಿಲ್ಲಾಡಳಿತವು ಕೂಡಲೆ 144ನೇ ಸೆಕ್ಷನ್ ಜಾರಿಗೊಳಿಸಿತು. ಅದರ ಬೆನ್ನಿಗೆ ಆ ದಿನ ಅಕ್ಟೋಬರ್ 13ರಂದು 24 ಗಂಟೆಗಳ ಕರ್ಫ್ಯೂ ಘೋಷಿಸಲಾಯಿತು. ಕಲ್ಲು ತೂರಾಟದ ಸುದ್ದಿ ಹರಡುತ್ತಿದ್ದಂತೆಯೇ ಸೆಂಧ್ವಾದ ಸಹ ವಿಭಾಗೀಯ ಮ್ಯಾಜಿಸ್ಟ್ರೇಟ್ ತಪಸ್ಯ ಪರಿಹಾರ್ ಅವರು ಸೆಂಧ್ವಾ ಪೊಲೀಸ್ ಠಾಣೆಯ ಅಧಿಕಾರಿ ಬಲ್ ದೇವ್ ಮುಜಾಲ್ದಾ ಮತ್ತು ಪೊಲೀಸ್ ಪಡೆಯೊಡನೆ ಸ್ಥಳಕ್ಕೆ ಧಾವಿಸಿದರು. ಸ್ಥಳೀಯರು ಪೊಲೀಸರ ಮೇಲೂ ಕಲ್ಲು ತೂರಿದರು. ಪರಿಣಾಮ ನಾಲ್ವರು ಪೊಲೀಸರು ಗಾಯಗೊಂಡರು ಎಂದು ತಿಳಿದು ಬಂದಿದೆ.
ಅಷ್ಟರಲ್ಲಿ 500ರಷ್ಟು ಹಿಂದೂಗಳು ಸೆಂಧ್ವಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಮುಸ್ಲಿಮರನ್ನು ಬಂಧಿಸಿ, ಎಫ್ ಐಆರ್ ದಾಖಲಿಸುವಂತೆ ಒತ್ತಾಯಿಸಿದರು. ಕಲ್ಲು ತೂರಾಟದಿಂದ ತಲೆಗೆ ಗಾಯವಾಗಿದ್ದ 14ರ ಪ್ರಾಯದ ಒಬ್ಬ ಹುಡುಗನನ್ನು ಕರೆದುಕೊಂಡು ತಾಯಿ ಮತ್ತು ಇಬ್ಬರು ಸಂಬಂಧಿಕರು ದೂರು ನೀಡಲು ಅದೇ ವೇಳೆ ಪೊಲೀಸ್ ಠಾಣೆಗೆ ಬಂದುದನ್ನು ಕಂಡ ಹಿಂದುತ್ವ ಗುಂಪು ಅವರಿಗೆ ತಡೆವೊಡ್ಡಿತು. ಆಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಹುಡುಗ ಮತ್ತು ಅವನ ಕುಟುಂಬದವರನ್ನು ರಕ್ಷಿಸಿದರು.
ಆ ಹುಡುಗನ ಕುಟುಂಬವನ್ನು ಮಾತ್ರವಲ್ಲದೆ ಆ ಗುಂಪು ಎಸ್ ಪಿ ದೀಪಕ್ ಶುಕ್ಲಾ ಕರೆದಿದ್ದ ಮಾತುಕತೆಗೆ ಬಂದಿದ್ದ ನಗರದ ಮುಖ್ಯ ಮುಸ್ಲಿಮ್ ಧರ್ಮ ಗುರು ಸಯ್ಯದ್ ಅಫ್ಜಲ್, ಕಾಂಗ್ರೆಸ್ ನಾಯಕ ಮುಹಮ್ಮದ್ ಸಮರ್ ಅವರ ಮೇಲೂ ಪೊಲೀಸರ ಸಮ್ಮುಖದಲ್ಲೇ ಹಲ್ಲೆಗೆ ಯತ್ನಿಸಿದ್ದರಿಂದ ಅವರು ಮಾತುಕತೆ ನಡೆಸದೆ ಹಿಂದಕ್ಕೆ ಹೋಗುವಂತೆ ಮಾಡಿತು.
“ಒಂದು ವೇಳೆ ಕೂಡಲೆ ಪೊಲೀಸರು ನಮ್ಮನ್ನು ಕಾಪಾಡದಿದ್ದರೆ ಆ ಗುಂಪು ನಮ್ಮನ್ನು ಬಡಿದು ಸಾಯಿಸುತ್ತಿತ್ತು” ಎಂದು ಸಯ್ಯದ್ ಅಫ್ಜಲ್ ಹೇಳುತ್ತಾರೆ.ನಾವು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ ಬಳಿಕ ಗುಂಪು ಚದುರಿ ಹೋಯಿತು. ಹಾಗೆ ಚದುರಿ ಹೋಗುವಾಗಲೂ ಮುಸ್ಲಿಮರ ಅಂಗಡಿಗಳು, ಪ್ರಾರ್ಥನಾ ಸ್ಥಳಗಳಿಗೆ ಹಾನಿ ಎಸಗಿತು. ಪೊಲೀಸರು ಬಹುತೇಕ ಅದನ್ನು ತಡೆದರು. ಆ ಗುಂಪು ಸದರ್ ಬಜಾರ್ ನಲ್ಲಿ ಒಂದು ಕಾರು ಮತ್ತು ಮೋಟಾರ್ ಬೈಕಿಗೆ ಹಾನಿ ಎಸಗಿದ್ದರಿಂದ ಪೊಲೀಸರು ಲಾಠಿ ಚಾರ್ಚ್ ನಡೆಸಬೇಕಾದ ಸ್ಥಿತಿ ಎದುರಾಯಿತು ಎಂದು ಅಧಿಕಾರಿಗಳು ಹೇಳುತ್ತಾರೆ.
“ಕೋವಿಡ್ ಸಂಕಷ್ಟದ ಬಳಿಕ ಆರಂಭವಾದ ಮೊದಲ ಹಬ್ಬದ ವಾತಾವರಣವು ಇಬ್ಬರು ಹುಡುಗರ ಜಗಳದಿಂದ ಹಾಳಾಯಿತು, ಕೋಮು ಗಲಭೆ ಆಯಿತು” ಎಂದು ಬಿಜೆಪಿ ನಾಯಕ ಮತ್ತು ಸೆಂಧ್ವಾ ಮುನಿಸಿಪಲ್ ಕಾರ್ಪೊರೇಶನ್ನಿನ ಉಪಾಧ್ಯಕ್ಷ ಚೋಟು ಚೌಧರಿ ಹೇಳಿತ್ತಾರೆ. ಶಾಂತಿ ನೆಲೆಸುವಂತೆ ಮಾಡುವಲ್ಲಿ ಆಡಳಿತ ನೀಡಿದ ಸಹಕಾರವನ್ನೂ ಅವರು ನೆನಪು ಮಾಡಿದರು.
ಇನ್ನಷ್ಟು ವಿಕೋಪಕ್ಕೆ ಹೋಗದಂತೆ ತಡೆದು ಶಾಂತಿ ನೆಲೆಸುವಂತೆ ಜಿಲ್ಲಾಡಳಿತವು ಎರಡೂ ಜನಾಂಗಗಳ ನಾಯಕರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿತು. ಆ ರಾತ್ರಿ ಪೊಲೀಸರು ಎರಡೂ ಕೋಮುಗಳ 30 ಜನರ ಮೇಲೆ ಮೊಕದ್ದಮೆ ದಾಖಲಿಸಿಕೊಂಡು, ತಡ ರಾತ್ರಿಯಲ್ಲಿ 15 ಜನರನ್ನು ಬಂಧಿಸಿದರು ಎಂದು ಎಸ್ ಪಿ ಶುಕ್ಲಾ ಅವರು ಹೇಳಿದರು.ಭಾರತೀಯ ದಂಡ ಸಂಹಿತೆಯ 143, 148, 149, 353, 307, 327 ವಿಧಿಗಳಡಿ ಪೊಲೀಸರ ಮೇಲೆ ಕಲ್ಲು ತೂರಿದ ಮೂವರ ಮೇಲೆ ಮೊದಲ ಎಫ್ ಐಆರ್ ಸಲ್ಲಿಕೆಯಾಯಿತು. ಇದರಲ್ಲಿ ಒಬ್ಬರನ್ನು ಬಂಧಿಸಲಾಗಿದೆ.
20 ಮುಸ್ಲಿಂ, 6 ಹಿಂದೂಗಳ ಮೇಲೆ ಮೊಕದ್ದಮೆಮತ್ತೆರಡು ಎಫ್ ಐಆರ್ ಗಳನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 143, 148, 294, 323, 506 ವಿಧಿಗಳಡಿ ಎರಡೂ ಕಡೆಯ 26 ಜನರ ಮೇಲೆ ಸಲ್ಲಿಸಲಾಗಿದೆ. ಇವರಲ್ಲಿ 20 ಜನ ಮುಸ್ಲಿಮರು, 6 ಮಂದಿ ಹಿಂದೂಗಳು.
ಸೋಮವಾರ ರಾತ್ರಿಯವರೆಗೆ ಪೊಲೀಸರು 22 ಜನರನ್ನು ಬಂಧಿಸಿದ್ದಾರೆ.
ಅಂದು ಪೊಲೀಸರು ಎರಡೂ ಸಮುದಾಯಗಳ ಜಂಟಿ ಸಭೆ ನಡೆಸಿ ಶಾಂತಿ ಕಾಪಾಡುವಂತೆ ಕೇಳಿಕೊಂಡರು. “ಸಭೆಯಲ್ಲಿ ಒಮ್ಮತಕ್ಕೆ ಬಂದ ಮೇಲೆ ನಡೆದ ರಾವಣ ಪ್ರತಿಕೃತಿ ದಹನ ಕಾರ್ಯಕ್ರಮದಲ್ಲಿ 200ರಷ್ಟು ಜನ ಮಾತ್ರ ಭಾಗವಹಿಸಿದ್ದರು. ದುರ್ಗಾ ವಿಸರ್ಜನೆ ಮತ್ತು ಈದ್ ಮಿಲಾದುನ್ನಬಿ ಮೆರವಣಿಗೆಗಳನ್ನು ರದ್ದು ಪಡಿಸಿ, ಮನೆಯಲ್ಲೇ ಆಚರಿಸುವಂತೆ ತೀರ್ಮಾನವಾಯಿತು” ಎಂದು ಸೆಂಧ್ವಾ ಎಸ್ ಡಿ ಎಂ ಪರಿಹರ್ ಹೇಳುತ್ತಾರೆ.
“ನಾವು ಮುಸ್ಲಿಂ ಸಮುದಾಯದವರಿಗೆ ಈದ್ ಮಿಲಾದ್ ನಿಮ್ಮ ಮೊಹಲ್ಲಾದೊಳಗೆ ಆಚರಿಸಿರಿ, ಆತಂಕವಿದ್ದ ಕಾರಣ ಮೆರವಣಿಗೆಯನ್ನು ನಿಷೇಧಿಸಿದೆವು.” ಎಂದು ಎಸ್ ಡಿಎಂ ಹೇಳಿದರು.
ಮಂಗಳವಾರ ಈದ್ ಮಿಲಾದ್ ಇದ್ದುದರಿಂದ ಎಲ್ಲ ಮುಸ್ಲಿಂ ಮೊಹಲ್ಲಾಗಳ ಸುತ್ತ ಪೊಲೀಸ್ ಕಾವಲು ನೀಡಿದ್ದೆವು ಎಂದು ಸೆಂಧ್ವಾ ಪೋಲೀಸು ಠಾಣೆಯ ಮುಖ್ಯಾಧಿಕಾರಿ ಬಲ್ ದೇವ್ ಮುಜಾಲ್ದಾ ಹೇಳಿದರು.
“144ನೇ ಸೆಕ್ಷನ್ ವೇಳೆ ಇಂದೋರ್ ನಿಂದ ಎರಡು ತುಕಡಿ ಪಡೆಯನ್ನು ಕರೆಸಿಕೊಳ್ಳಲಾಗಿದೆ; ಅವರು ಕರ್ತವ್ಯದಲ್ಲಿ ಇದ್ದಾರೆ. ವಾಟ್ಸಪ್ ಗುಂಪುಗಳ ಮೂಲಕ ಚಿತಾವಣೆ ಮಾಡುವವರ ಬಗೆಗೂ ಪೊಲೀಸರು ಕಣ್ಣಿಟ್ಟಿದ್ದಾರೆ. ಪೊಲೀಸರು ಈಗಾಗಲೇ ಪ್ರಚೋದನಾಕಾರಿ ಸಂಗತಿ ಪೋಸ್ಟ್ ಮಾಡಿದ ಕೆಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮುಜಾಲ್ದಾ ತಿಳಿಸಿದರು.
ಪರಿಸ್ಥಿತಿ ಹತೋಟಿಗೆ ಬರುವ ವರೆಗೆ 144 ಸೆಕ್ಷನ್ ಜಾರಿಯಲ್ಲಿರುತ್ತದೆ ಎಂದು ಎಸ್ ಡಿಎಂ ತಿಳಿಸಿದರು. ಈದ್ ಮಿಲಾದ್ ಪ್ರಯುಕ್ತ ಎತ್ತರದ ಕಟ್ಟಡಗಳ ಮೂಲಕ ಪೊಲೀಸರು ಕಣ್ಣಿಟ್ಟಿದ್ದರು.
ಗರ್ಬಾ ನೃತ್ಯ ವೇದಿಕೆಯಲ್ಲಿ ಒಬ್ಬ ಮುಸ್ಲಿಂ ಹುಡುಗ ಕಾಣಿಸಿದ್ದಷ್ಟೇ ಈ ಕೋಮು ಗಲಭೆಗೆ ಕಾರಣ ಎನ್ನಲಾಗದು. ಅಕ್ಟೋಬರ್ 10ರಂದು ಅವರು ಓದುತ್ತಿದ್ದ ಕಾಲೇಜಿನ ಗರ್ಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಆರೋಪಿಸಿ ನಾಲ್ವರು ಮುಸ್ಲಿಂ ಯುವಕರನ್ನು ಜೈಲಿಗೆ ಕಳುಹಿಸಲಾಗಿತ್ತು.
ಆ ಕಾರ್ಯಕ್ರಮ ಎಲ್ಲರಿಗೂ ಮುಕ್ತ ಎಂದು ಹೇಳಲಾಗಿತ್ತು. ಆದರೆ ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ ನವರು ವಿಹಿಂಪ ಪಾರ್ಕಿಂಗ್ ಪ್ರದೇಶದಲ್ಲಿ ಆ ಕಾಲೇಜಿನ ವಿದ್ಯಾರ್ಥಿಗಳೇ ಆದ ನಾಲ್ವರನ್ನು ಹಿಡಿದು ಗಾಂಧಿ ನಗರ ಪೊಲೀಸರಿಗೆ ಒಪ್ಪಿಸಿದ್ದರು.
ಸಾರ್ವಜನಿಕ ಅಸಭ್ಯ ವರ್ತನೆ, ಕೋವಿಡ್ 19 ನಿಯಮ ಮುರಿದರು ಎಂದು ಆರೋಪಿಸಿ ಆ ನಾಲ್ವರನ್ನು ಆ ದಿನವೇ ಜೈಲಿಗೆ ಕಳುಹಿಸಲಾಯಿತು. ಇದಕ್ಕೆ ಮಿಗಿಲಾಗಿ ರತ್ಲಾಮ್ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್ ನವರು 56 ಗರ್ಭಾ ಪೆಂಡಾಲ್ ಗಳಿಗೆ ಮುಸ್ಲಿಮರು ಪ್ರವೇಶಿಸುವಂತಿಲ್ಲ ಎಂದು ಎಲ್ಲ ಕಡೆ ಪೋಸ್ಟರ್ ಅಂಟಿಸಿದ್ದರು. ಯಾವುದೇ ಗೊಂದಲಕ್ಕೆ, ವಿವಾದಕ್ಕೆ ಅವಕಾಶ ಕೊಡಬೇಡಿ ಎಂದು ಅದರಲ್ಲಿ ವಿನಂತಿಯೂ ಇತ್ತು. ಮಧ್ಯ ಪ್ರದೇಶದ ಉದ್ದಗಲಕ್ಕೂ ಸಂಘ ಪರಿವಾರದವರು ಈ ಬಗೆಯ ಪೋಸ್ಟರ್ ಗಳನ್ನು ಅಂಟಿಸಿದ್ದರು. ಹಿಂದೆ ಸಾಮರಸ್ಯದಿಂದ ಆಚರಿಸಿದ್ದ ಕಾಲವನ್ನು ಈಗ ಕಲ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ.