ಬಂದರ್ ವಾರ್ಡ್ ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿಲ್ಲ: ಪಾಲಿಕೆ ಸದಸ್ಯೆ ಝೀನತ್ ಸಂಶುದ್ದೀನ್ ಸ್ಪಷ್ಟನೆ

Prasthutha|

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಬಂದರ್ ವಾರ್ಡ್ ನಲ್ಲಿ ಕಸದ ಸಮಸ್ಯೆಯನ್ನು ಈಗಾಗಲೇ ಪರಿಹರಿಸಲಾಗಿದ್ದು, ವಾರ್ಡ್ ನ ಯಾವುದೇ ಪ್ರದೇಶದಲ್ಲಿ ಕಸದ ರಾಶಿ ಇಲ್ಲ. ಈ ಬಗ್ಗೆ ಕೆಲವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು. ವಾರ್ಡ್ ನಲ್ಲಿ ಉಂಟಾಗಿರುವ ಯಾವುದೇ ಸಮಸ್ಯೆಗೆ ತಕ್ಷಣ ಸ್ಪಂದಿಸುತ್ತಿದ್ದೇನೆ ಎಂದು ಪಾಲಿಕೆ ಸದಸ್ಯೆ ಝೀನತ್ ಸಂಶುದ್ದೀನ್ ಸ್ಪಷ್ಟಪಡಿಸಿದ್ದಾರೆ.

- Advertisement -


ಬಂದರ್ ವಾರ್ಡ್ ನಲ್ಲಿ ಯುವಕರ ತಂಡ ಸ್ವಚ್ಛತಾ ಕಾರ್ಯ ನಡೆಸಿರುವುದು ಸ್ವಾಗತಾರ್ಹ. ಈ ಬಗ್ಗೆ ತಮಗೂ ಮಾಹಿತಿ ನೀಡಿದ್ದರೆ ಇನ್ನೂ ಹೆಚ್ಚಿನ ಯುವಕರನ್ನು ಸೇರಿಸಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಬಹುದಿತ್ತು. ವಾರ್ಡ್ ನ ಅಭಿವೃದ್ಧಿ ವಿಷಯದಲ್ಲಿ ಯಾರೊಂದಿಗೂ ಕೈಜೋಡಿಸಿ ಕೆಲಸ ಮಾಡಲು ಸಿದ್ಧವಿದ್ದೇನೆ. ವಾರ್ಡ್ ನ ವಿಷಯದಲ್ಲಿ ಇದುವರೆಗೆ ನಿರ್ಲಕ್ಷ್ಯ ಮಾಡಿಲ್ಲ. ಈ ಬಗ್ಗೆ ಸಂಶಯವಿದ್ದವರು ಕ್ಷೇತ್ರದ ಜನರೊಂದಿಗೆ ಕೇಳಬಹುದು, ವಾರ್ಡ್ ನ ನಿವಾಸಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದೇನೆ. ಆದರೂ ಸ್ಥಳೀಯ ಜನಪ್ರತಿನಿಧಿ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಕೆಲವು ಯುವಕರು ಆರೋಪಿಸಿರುವುದು ನೋವು ತಂದಿದೆ ಎಂದು ಝೀನತ್ ಸ್ಪಷ್ಟಪಡಿಸಿದ್ದಾರೆ.


ಮಹಾನಗರ ಪಾಲಿಕೆ ಸಿಬ್ಬಂದಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ಕೆಲಸ ಸಮರ್ಪಕವಾಗಿ ಮಾಡುತ್ತಿದ್ದಾರೆ. ಬಂದರ್ ವಾರ್ಡ್ ನಲ್ಲಿಯೂ ಈ ಕೆಲಸ ಸರಿಯಾಗಿ ನಡೆಯುತ್ತಿದೆ. ಆದರೂ ಕೆಲವು ಜನರು ಸಿಬ್ಬಂದಿ ಹೋದ ಬಳಿಕ ರಸ್ತೆ ಬದಿ ಕಸ ಎಸೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ನಿವಾಸಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಕೂಡ ಪಾಲಿಕೆಯೊಂದಿಗೆ ಸಹಕರಿಸಬೇಕು. ನಮ್ಮ ವಾರ್ಡ್ ಇಡೀ ನಗರದಲ್ಲೇ ಅತ್ಯಂತ ಸ್ವಚ್ಛತೆಯ ವಾರ್ಡ್ ಆಗಿ ರೂಪಿಸಲು ತಾವು ಪಣತೊಟ್ಟಿದ್ದು, ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

- Advertisement -


ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ, ವಾರ್ಡ್ ನ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಕೈಲಾದ ಸಹಾಯ ಮಾಡಿದ್ದೇನೆ. ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದೇನೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಬಂದರ್ ವಾರ್ಡ್ ನಲ್ಲಿ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದೆ. ಒಳಚರಂಡಿ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದು ಹೇಳಿಕೆಯಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.



Join Whatsapp