ಹೊಸದಿಲ್ಲಿ: ತನ್ನ ಅನಾರೋಗ್ಯ ತಂದೆಗೆ ಕಿಡ್ನಿ ದಾನ ಮಾಡಲು ಬಯಸಿದ ಡ್ರಗ್ಸ್ ಪ್ರಕರಣದ ಆರೋಪಿಯನ್ನು ಅಗತ್ಯವಾದ ವೈದ್ಯಕೀಯ ಪರೀಕ್ಷೆಗೆ ಜೈಲಿನಿಂದ ಆಸ್ಪತ್ರೆಗೆ ಕರೆದೊಯ್ಯಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಕಿಡ್ನಿ ದಾನ ಮಾಡಲು ಯೋಗ್ಯ ಎಂದು ಕಂಡುಬಂದಲ್ಲಿ ಮಧ್ಯಪ್ರದೇಶ ಹೈಕೋರ್ಟಿನಲ್ಲಿ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೈದಿಗೆ ಸೂಚಿಸಿದೆ.
ತಂದೆಗೆ ಕಿಡ್ನಿ ದಾನಕ್ಕಾಗಿ ಜಾಮೀನು ನೀಡಬೇಕೆಂದು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಮಧ್ಯಪ್ರದೇಶ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ತಂದೆಯನ್ನು ನೋಡಿಕೊಳ್ಳಲು ಕೈದಿಗೆ ಸಹೋದರರಿದ್ದಾರೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ವೈದ್ಯಕೀಯ ದಾಖಲೆಗಳ ಪ್ರಕಾರ ಅರ್ಜಿದಾರನ ತಂದೆಯ ಜೀವವನ್ನು ಉಳಿಸಲು ಕಿಡ್ನಿ ಕಸಿ ಅಗತ್ಯ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.