ಬೆಂಗಳೂರು : ಕೇವಲ ಒಂದು ಸಾವಿರ ರೂ ಹಣಕ್ಕಾಗಿ ಪ್ಲಂಬರ್ ವೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಕೋಣನಕುಂಟೆಯಲ್ಲಿ ನಡೆದಿದೆ. ಕೋಣನಕುಂಟೆಯ ಮಂಜುನಾಥ್ ಕೊಲೆಯಾದವರು. ಮೊದಲು ಅನುಮಾನಾಸ್ಪದ ಸಾವು ಎಂದು ದಾಖಲಾಗಿದ್ದ ಪ್ರಕರಣವು ಪೊಲೀಸರ ತನಿಖೆಯಲ್ಲಿ ಕೊಲೆ ಎನ್ನುವುದು ಪತ್ತೆಯಾಗಿದೆ.
ಕೃತ್ಯವೆಸಗಿದ ಸ್ನೇಹಿತ ಆಕಾಶ್ ನನ್ನು ಬಂಧಿಸಿ ಮತ್ತೊಬ್ಬನ ಪತ್ತೆಗೆ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.ಕೊಲೆಯಾದ ಮಂಜುನಾಥ್ ಹಾಗೂ ಆರೋಪಿ ಆಕಾಶ್ ಇಬ್ಬರು ಸ್ನೇಹಿತರಾಗಿದ್ದು, ಪ್ಲಂಬರ್ ಕೆಲಸ ಮಾಡಿಕೊಂಡಿದ್ದರು. ಇತ್ತೀಚೆಗೆ ಕೆಲಸದ ಸಂಬಳ ಬಂದಿದ್ದು, ಹೆಚ್ಚುವರಿಯಾಗಿ ಬಂದ 1 ಸಾವಿರಕ್ಕಾಗಿ ಇಬ್ಬರ ಮಧ್ಯೆ ಗಲಾಟೆ ಆರಂಭವಾಗಿದೆ. ಈ ವೇಳೆ ಆರೋಪಿ ಆಕಾಶ್ ಮಂಜುನಾಥ್ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ.
ಗಾಯಗೊಂಡಿದ್ದ ಮಂಜುನಾಥ್ ನನ್ನು ಅಪಘಾತವಾಗಿದೆ ಎನ್ನುವ ನೆಪಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಬಳಿಕ ಈ ಬಗ್ಗೆ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮಧ್ಯೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದು, ಆತನಿಗೆ ಅಪಘಾತದ ಸಂಬಂಧ ಗಾಯಗಳಾಗಿಲ್ಲ. ಹಲ್ಲೆಯಿಂದಾದ ಗಾಯಗಳು ಎಂದು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಕೋಣನಕುಂಟೆ ಪೊಲೀಸರು ತನಿಖೆ ನಡೆಸಿದ್ದು, ಮೃತ ಮಂಜುನಾಥ್ ಹಾಗೂ ಆರೋಪಿ ಆಕಾಶ್ ನಡುವೆ ಗಲಾಟೆಯಾಗಿರುವುದು ತಿಳಿದು ಬಂದಿದೆ. ಬಳಿಕ ವಿಚಾರಣೆಗೊಳಪಡಿಸಿದಾಗ ಆಕಾಶ್ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಕೂಡ ಭಾಗಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.