► ಕ್ಷಮಾಪಣೆಯ ತಪ್ಪನ್ನು ಗಾಂಧಿಯ ತಲೆಗೆ ಕಟ್ಟಿದ ಸಿಂಗ್
ನವದೆಹಲಿ: ಸಾವರ್ಕರ್ ಕ್ಷಮಾಪಣೆ ಕೇಳಲು ಗಾಂಧಿಯೇ ಕಾರಣಕರ್ತರು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೊಸ ವಾದ ಮುಂದಿಟ್ಟಿದ್ದಾರೆ. ಮಂಗಳವಾರ ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ನಡೆದ ಸಾವರ್ಕರ್ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಸಾವರ್ಕರ್ ವಿರುದ್ಧ ಸಾಕಷ್ಟು ಅಪಪ್ರಚಾರ ನಡೆದಿದೆ, ಅವರ ವಿರುದ್ಧ ಸುಳ್ಳುಗಳನ್ನು ಪ್ರಚಾರ ಮಾಡುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಕ್ಷಮಾಪಣೆ ಪತ್ರ ಬರೆಯಲು ಸಾವರ್ಕರ್ ಗೆ ಸಲಹೆ ನೀಡಿದ್ದು ಮಹಾತ್ಮ ಗಾಂಧಿ ಎಂಬುದು ಅಪಪ್ರಚಾರವೆಸಗುವ ಯಾರಿಗೂ ಗೊತ್ತಿಲ್ಲ ಎಂದು ಅವರು ಹೇಳಿದರು. ಬ್ರಿಟಿಷರಿಗೆ ಸಾಕಷ್ಟು ಬಾರಿ ಕ್ಷಮಾಪಣೆ ಪತ್ರವನ್ನು ಬರೆದಿದ್ದಾರೆ ಎಂದು ಹೇಳುತ್ತಾರೆ. ಆದರೆ ಸತ್ಯ ಏನೆಂದರೆ ಸಾವರ್ಕರ್ ಬಿಡುಗಡೆ ಬಯಸಿ ಕ್ಷಮಾಪಣೆ ಪತ್ರಗಳನ್ನು ಬರೆಯಲಿಲ್ಲ. ಸಾಮಾನ್ಯವಾಗಿ ಒಬ್ಬ ಕೈದಿಗೆ ಕ್ಷಮಾಪಣೆ ಪತ್ರ ಬರೆಯುವ ಹಕ್ಕುಗಳಿವೆ. ಮಹಾತ್ಮ ಗಾಂಧಿ ಅವರು ಕ್ಷಮಾಪಣೆ ಪತ್ರ ಬರೆಯುವಂತೆ ಸಾವರ್ಕರ್ ಅವರಿಗೆ ಸೂಚಿಸಿದ್ದರು. ಅದರಂತೆ ಅವರು ಬರೆದರು ಎಂದು ಸಿಂಗ್ ಹೇಳಿದ್ದಾರೆ.
ಸಾವರ್ಕರ್ ಅವರನ್ನು ಬಿಡುಗಡೆ ಗೊಳಿಸುವಂತೆ ಗಾಂಧೀಜಿಯೇ ಮನವಿ ಮಾಡಿದ್ದರು. ಶಾಂತಿಯುತವಾಗಿಯೇ ಸ್ವಾತಂತ್ರ್ಯ ಚಳುವಳಿಯನ್ನು ನಡೆಸಬೇಕು ಎಂದು ಗಾಂಧಿ ಹೇಳಿದ್ದರು. ಅದರಂತೆ ಸಾವರ್ಕರ್ ನಡೆದುಕೊಂಡಿದ್ದಾರೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.