ಕರಿಪ್ಪೂರ್: ಹೃದಯ ವಿದ್ರಾವಕ ಘಟನೆಯೊಂದರಲ್ಲಿ ಮನೆಯ ಗೋಡೆಯು ಕುಸಿದು ಇಬ್ಬರು ಪುಟ್ಟ ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ಕೇರಳದ ಕರಿಪ್ಪೂರ್ ಎಂಬಲ್ಲಿ ನಡೆದಿದೆ.
ಮೃತರನ್ನು 7 ತಿಂಗಳು ಪ್ರಾಯದ ಲುಬಾನಾ ಫಾತಿಮಾ, ಹಾಗೂ 7 ವರ್ಷ ವಯಸ್ಸಿನ ಲಿಯಾನಾ ಫಾತಿಮಾ ಎಂದು ಗುರುತಿಸಲಾಗಿದೆ.
ಕರಿಪ್ಪೂರ್ ನಿವಾಸಿ ಅಬೂಬಕರ್ ಎಂಬವರ ಮನೆಯ ಗೋಡೆಯ ಮೇಲೆ ಮೊದಲಿಗೆ ಕಾಂಪೌಂಡ್ ಗೋಡೆ ಕುಸಿದಿತ್ತು. ಬಳಿಕ ತಡರಾತ್ರಿ ಭಾರ ತಾಳಲಾರದೆ ಮನೆಯ ಗೋಡೆಯು ಕುಸಿದಿದೆ. ಈ ವೇಳೆ ಮನೆಯೊಳಗೆ ಅಬೂಬಕರ್ ಅವರ ಪುತ್ರಿ ಸುಮಯ್ಯಾ [ 28] ತನ್ನ ಇಬ್ಬರು ಮಕ್ಕಳೊಂದಿಗೆ ಮಲಗಿದ್ದರು.
ಎಲ್ಲರೂ ನಿದ್ರೆಗೆ ಜಾರಿದ್ದ ವೇಳೆ ಏಕಾಏಕಿ ಗೋಡೆ ಕುಸಿದಿದ್ದು, ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಯಿ ಸುಮಯ್ಯಾರನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಪತಿ ಉದ್ಯೋಗ ನಿಮಿತ್ತ ಕಾಸರಗೋಡಿಗೆ ತೆರಳಿದ್ದ ಕಾರಣ ಸುಮಯ್ಯಾ ತವರು ಮನೆಯಲ್ಲೇ ವಾಸವಾಗಿದ್ದರು
ರಾತ್ರಿ ಮಲಗಿದ್ದ ವೇಳೆ ದುರ್ಘಟನೆ ನಡೆದಿದ್ದು, ಕರಿಪ್ಪೂರ್ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವುದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ