ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನ ಮುಗಿದ ಅಧ್ಯಾಯ. ಆ ಬಗ್ಗೆ ಚರ್ಚೆ ಮಾಡಲು ನನಗೆ ಯಾವುದೇ ಆಸಕ್ತಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರ ಕೆಡವಿದ್ದು ಸಿದ್ದರಾಮಯ್ಯ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, ಸರಕಾರ ಕೆಡವಿದ್ದು ಯಾರು ಎಂಬುದರ ಬಗ್ಗೆ ಯಾರು ಮಾತನಾಡಿದ್ದಾರೋ ಅವರನ್ನೇ ಹೋಗಿ ಕೇಳಿ. ರಾಜ್ಯದ ಜನರ ಸೇವೆ, ಪಕ್ಷವನ್ನು ಅಧಿಕಾರಕ್ಕೆ ತರುವುದು, ಜನ ನಮಗೆ ಆಶೀರ್ವಾದ ಮಾಡಬೇಕು ಎಂಬುದರ ಮೇಲಷ್ಟೇ ನಾವು ಆಸಕ್ತಿ ವಹಿಸಿದ್ದೇವೆ ಎಂದರು
ಡಿಸೈನ್ ಬಾಕ್ಸ್ ಅವರು ಸಹಾಯ ಮಾಡುತ್ತಿದ್ದರು:
ನಿಮ್ಮ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತಿರುವ ಏಜೆನ್ಸಿ ಡಿಸೈನ್ ಬಾಕ್ಸ್ ಮೇಲೆ ಐಟಿ ದಾಳಿ ನಡೆದಿದೆಯಲ್ಲಾ ಎಂಬ ಮಾಧ್ಯಮದವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಯಾರು ಹೇಳಿದ್ದು ಅವರು ನನ್ನ ಸಾಮಾಜಿಕ ಜಾಲತಾಣ ನಿರ್ವಹಿಸುತ್ತಿದ್ದಾರೆ ಎಂದು ಮರುಪ್ರಶ್ನಿಸಿದರು.
ಅವರು ನನಗೆ ಸಹಾಯ ಮಾಡುತ್ತಿದ್ದರು. ಅಲ್ಲಿರುವವರು ವೃತ್ತಿಪರರು. ಅವರು ಐಟಿ ಅಧಿಕಾರಿಗಳಿಗೆ ಯಾವ ಉತ್ತರ ಕೊಡಬೇಕೋ ಕೊಡುತ್ತಾರೆ. ಅವರು ನಿನ್ನೆ ನನ್ನ ಜತೆ ಮಾತನಾಡಲು ಪ್ರಯತ್ನಿಸಿದರು. ಆದರೆ ನನಗೆ ಸಮಯ ಇರದ ಕಾರಣ ಅದು ಸಾಧ್ಯವಾಗಲಿಲ್ಲ. ಐಟಿ ದಾಳಿ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಆಮೇಲೆ ಮಾತನಾಡುತ್ತೇನೆ ಎಂದು ಡಿಕೆಶಿ ತಿಳಿಸಿದರು.