ಬೆಂಗಳೂರು: ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಮೂಡಬಿದ್ರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಗ್ರೀಷ್ಮಾ ನಾಯಕ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಶುಲ್ಕ ಪಾವತಿಸದ ಕಾರಣ ಮೊದಲ ಪ್ರಯತ್ನದಲ್ಲಿ ಪರೀಕ್ಷೆ ಬರೆಯಲು ಗ್ರೀಷ್ಮಾ ನಾಯಕ್ ಗೆ ಅವಕಾಶ ನಿರಾಕರಿಸಲಾಗಿತ್ತು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಪೂರಕ ಪರೀಕ್ಷೆಗೆ ಹಾಜರಾಗಿದ್ದಳು.
ಆಳ್ವಾಸ್ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಗ್ರೀಷ್ಮಾ ನಾಯಕ್ 625ರಲ್ಲಿ 599 ಅಂಕ ಪಡೆದು ಪ್ರಥಮ ಸ್ಥಾನ ಪಡೆದರೆ, ಕಲಬುರಗಿಯ ಗ್ರಮರ್ ಮಲ್ಟಿ ಮೀಡಿಯಾ EMHS ಶಾಲೆಯ ಮೊಹಮ್ಮದ್ ಶಹನಾಝ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಒಟ್ಟು 53,155 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು, ಈ ಪೈಕಿ 29522 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕೊರೋನಾ ಕಾರಣದಿಂದ ಶಿಕ್ಷಣ ಇಲಾಖೆ ಪರೀಕ್ಷೆಯಲ್ಲಿ ಬದಲಾವಣೆಗೊಳಿಸಿ ಕಳೆದ ಸೆಪ್ಟೆಂಬರ್ ನಲ್ಲಿ ಎರಡು ದಿನಗಳ ಕಾಲ ಪರೀಕ್ಷೆಯನ್ನು ನಡೆಸಿತ್ತು. ಒಟ್ಟು 357 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಒಟ್ಟು ಶೇ.55.54 ರಷ್ಟು ಫಲಿತಾಂಶ ಬಂದಿದೆ ಎಂದು ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.