ಬೆಂಗಳೂರು; ಬೆಂಗಳೂರು ನಗರ ಸೇರಿ ವಿವಿಧ ಜಿಲ್ಲೆಗಳ ಉಸ್ತುವಾರಿ ಯಾರಿಗೆ ನೀಡಬೇಕೆಂಬುದು ಮುಖ್ಯಮಂತ್ರಿಗಳ ಪರಮಾಧಿಕಾರ. ಆ ವಿಚಾರದಲ್ಲಿ ನಾನು ಮೂಗು ತೂರಿಸುವುದಿಲ್ಲ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮುಖ್ಯಮಂತ್ರಿಗಳು ಉಸ್ತುವಾರಿ ಸಚಿವರ ಕುರಿತು ನಿರ್ಧರಿಸಲಿದ್ದಾರೆ ಎಂದು ರಾಜ್ಯದ ವಸತಿ ಮತ್ತು ಮೂಲಸೌಲಭ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
“ಬೆಂಗಳೂರು ನಗರದ ಉಸ್ತುವಾರಿಯನ್ನು ಅಶೋಕನಿಗೆ ಕೊಡ್ತಾರಾ, ಸಿಎಂ ಇಟ್ಟುಕೊಳ್ಳುತ್ತಾರಾ ಇಲ್ಲಾ ಸೋಮಣ್ಣನಿಗೆ ಕೊಡ್ತಾರ, ಇಲ್ಲಾ ಎರಡು ಮಾಡ್ತಾರ, ಏನು ಮಾಡಿದ್ರೂ ನಮ್ಮ ತಕರಾರಿಲ್ಲ” ಎಂದು ತಿಳಿಸಿದರು.
ಬೆಂಗಳೂರು ನಗರಕ್ಕೆ ಯಾರನ್ನೂ ಉಸ್ತುವಾರಿ ಸಚಿವರನ್ನಾಗಿ ಮಾಡಿಲ್ಲ. ಕೋವಿಡ್ ನಿರ್ವಹಣೆ, ದಸರಾ ಮತ್ತು ಸ್ವಾತಂತ್ರ್ಯೋತ್ಸವ ಸಂಬಂಧ ತಾತ್ಕಾಲಿಕ ನೇಮಕಾತಿ ನಡೆದಿದೆ ಎಂದು ಸೋಮಣ್ಣ ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ನಾನು ಜೆ.ಎಚ್.ಪಟೇಲ್ ಅವರ ಸಚಿವ ಸಂಪುಟದಲ್ಲಿ ಬೆಂಗಳೂರು ನಗರದ ಸಚಿವನಾಗಿದ್ದವನು. ನನಗೆ ಎಲ್ಲರಿಗಿಂತ ಹೆಚ್ಚು ಅನುಭವ ಮತ್ತು ಅರ್ಹತೆ ಇದೆ. ಆದ್ದರಿಂದ ನನ್ನ ಹೆಸರನ್ನೂ ಪರಿಗಣಿಸಿ ಎಂದು ಮುಖ್ಯಮಂತ್ರಿಗಳನ್ನು ಕೇಳಿರುವುದು ನಿಜ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಬುದ್ಧಿವಂತರಿದ್ದರೆ ಚರ್ಚೆ ನಡೆಯುತ್ತದೆ. ಬೆಂಗಳೂರು ನಗರದ ಎಲ್ಲ ಶಾಸಕರೂ ಒಗ್ಗಟ್ಟಾಗಿದ್ದೇವೆ ಎಂದು ನುಡಿದರು.
ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು. ನನ್ನ ಸ್ನೇಹಿತರು; ಬುದ್ಧಿವಂತರು. ಅವರ ಬಳಿ ಇರುವ ಮಾಹಿತಿ ಕುರಿತು ನನಗೆ ತಿಳಿದಿಲ್ಲ. ಸಚಿವರು ಐಟಿ ದಾಳಿ ನಡೆಸದಂತೆ ಒತ್ತಾಯಿಸಿದ್ದರೆ ಅವರ ಹೆಸರನ್ನು ಹೇಳಬೇಕಿತ್ತು ಎಂದು ಈ ಕುರಿತ ಪ್ರಶ್ನೆಗೆ ಉತ್ತರಿಸಿದರು. ಐಟಿಯವರು ತಮ್ಮ ಕೆಲಸ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಅವರೂ ಹೇಳಿದ್ದಾರೆ ಎಂದರು.
ಆದಾಯ ತೆರಿಗೆ ಇಲಾಖೆ ಯಾರ ಹಂಗಿನಲ್ಲೂ ಇಲ್ಲದ ಒಂದು ಸ್ವಾಯತ್ತ ಸಂಸ್ಥೆ. ಸಮರ್ಪಕವಾಗಿ ಮಾಹಿತಿ ಕ್ರೋಡೀಕರಿಸಿ ಅದು ಸೂಕ್ತ ಕ್ರಮ ಕೈಗೊಳ್ಳುತ್ತದೆ. ಇದೊಂದು ಸಹಜವಾದ ಪ್ರಕ್ರಿಯೆ. ಆ ಪ್ರಕ್ರಿಯೆಗೆ ಸುಣ್ಣ- ಬಣ್ಣ ಮಾಡಿ ಮತ್ತೊಂದು ಡ್ರೆಸ್ ಮಾಡುವ ಅಗತ್ಯವಿಲ್ಲ. ಯಾವುದೇ ಸರಕಾರ ಇದ್ದರೂ ಎಲ್ಲರನ್ನೂ ಒಂದೇ ರೀತಿಯಿಂದ ನೋಡುತ್ತದೆ ಎಂದು ಅವರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಾಜ್ಯದಲ್ಲಿ ನಡೆಸಿದ ದಾಳಿ ಕುರಿತ ಪ್ರಶ್ನೆಗೆ ಉತ್ತರ ನೀಡಿದರು.
ಭ್ರಷ್ಟಾಚಾರ ಎಂಬುದು ಒಂದು ದೊಡ್ಡ ಅಂಟುಜಾಡ್ಯ. ಈ ಜಾಡ್ಯಕ್ಕೆ ಯಾರ್ಯಾರು ಪಿತಾಮಹರು ಎಂದು ಕೂಡ ನಿಮಗೂ ತಿಳಿದಿದೆ. ಭ್ರಷ್ಟಾಚಾರ ತಡೆಯಲು ಐಟಿ, ಇಡಿ ಇಲಾಖೆಗಳಿವೆ. ಭ್ರಷ್ಟಾಚಾರ ತಡೆಯಲು ಕೇಂದ್ರದ ಬಿಜೆಪಿ ಸರಕಾರವು ಈ ಇಲಾಖೆಗಳನ್ನು ಚುರುಕುಗೊಳಿಸಿ ಯಾರೇ ಭ್ರಷ್ಟರಿದ್ದರೂ ಅದನ್ನು ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಿರುವುದು ಮೆಚ್ಚತಕ್ಕ ವಿಚಾರ ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿಂತ ನೀರಲ್ಲ. ಕೇಂದ್ರದ ಆದಾಯ ತೆರಿಗೆ ಇಲಾಖೆ ತನ್ನ ಕರ್ತವ್ಯ ಮಾಡುವಾಗ ಅವನು ಯಾವ ಪಕ್ಷ, ಯಾರ ಜೊತೆ ಇದ್ದ, ಯಾರ ಪಿಎ ಎಂದು ನೋಡುವುದಿಲ್ಲ. ಅವೆಲ್ಲವೂ ಇಲ್ಲಿ ಗೌಣ ಎಂದು ಪ್ರಶ್ನೆಗೆ ಉತ್ತರಿಸಿದರು.
ಸಿಂದಗಿಯ ಅಲಮೇಲದಲ್ಲಿ ಉಪ ಚುನಾವಣೆ ಪ್ರಚಾರ ಮಾಡಿದ್ದೇನೆ. ಅಭಿವೃದ್ಧಿ ಪರವಾಗಿ ಮತ್ತು ಬಿಜೆಪಿ ಪರವಾಗಿ ಜನರು ಬೆಂಬಲ ನೀಡಲಿದ್ದಾರೆ. ಹತ್ತಾರು ಸಾವಿರ ಮತಗಳ ಅಂತರದಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಸವಿನೆನಪಿಗಾಗಿ ಹಿನ್ನೆಲೆಯಲ್ಲಿ ರೈತ ಮೋರ್ಚಾ ವತಿಯಿಂದ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಮತ್ತು ಪ್ಲಾಸ್ಟಿಕೇತರ ಬ್ಯಾಗ್ ಬಳಕೆ ಮಾಡುವ ಕಾರ್ಯಕ್ಕೆ ಚಾಲನೆ ಕೊಡಲಾಗಿದೆ ಎಂದರು.
ಇಲಾಖೆಯ ಯೋಜನೆಗಳು ಮತ್ತು ಕಾರ್ಯಗಳನ್ನು ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಮುಟ್ಟಿಸುವ ನಿಟ್ಟಿನಲ್ಲಿ ರಾಜ್ಯ ಕಾರ್ಯಾಲಯಕ್ಕೆ ಭೇಟಿ ನೀಡುವುದು ಒಂದು ಮಹತ್ವದ ಕ್ರಮ. ಇಲ್ಲಿ ಬಂದಾಗ ಸಾಮಾನ್ಯ ಜನರ ಒಡನಾಟವೂ ಆಗಲಿದೆ ಎಂದು ಅವರು ತಿಳಿಸಿದರು. ರಾಜ್ಯದ ಜನತೆಗೆ ಮಹಾನವಮಿ ಮತ್ತು ಆಯುಧ ಪೂಜೆಯ ಶುಭಾಶಯ ಕೋರಿದರು.
ಬೆಂಗಳೂರು ಉಸ್ತುವಾರಿಯನ್ನು ವಿಭಜಿಸಿ ಇಬ್ಬರು ಸಚಿವರಿಗೆ ನೀಡಲಿ: ವಿ. ಸೋಮಣ್ಣ
Prasthutha|