ದೆಹಲಿ ಪೊಲೀಸರ ನಿರ್ಲಕ್ಷ್ಯ | ಮನೆಕೆಲಸದ ಹುಡುಗಿಯ ಅಸಹಜ ಸಾವು | 2 ವಾರಗಳಾದರೂ ಎಫ್ ಐಆರ್ ಇಲ್ಲ | ಪ್ರತಿಭಟಿಸಿದವರಿಗೆ ಲಾಠಿ ಏಟು

Prasthutha|

ನವದೆಹಲಿ : ಮನೆಯಲ್ಲಿ ಕೆಲಸಕ್ಕಿದ್ದ ಹದಿ ಹರೆಯದ ಯುವತಿಯ ಅಸಹಜ ಸಾವು ಸಂಭವಿಸಿ ಎರಡು ವಾರಗಳು ಕಳೆದರೂ, ದೆಹಲಿ ಪೊಲೀಸರು ಎಫ್ ಐಆರ್ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಘಟನೆಯನ್ನು ಪ್ರತಿಭಟಿಸಿದ ಮೃತ ಹುಡುಗಿಯ ಕುಟುಂಬಸ್ಥರ ಮೇಲೆ ಭೀಕರ ಹಲ್ಲೆ ನಡೆಸಿದ್ದೇ ಅಲ್ಲದೆ, ಅವರ ಪರವಾಗಿ ನಡೆದ ಪ್ರತಿಭಟನೆಯ ವರದಿ ಮಾಡಲು ತೆರಳಿದ್ದ ಪತ್ರಕರ್ತನಿಗೂ ಥಳಿಸಿದ ಘಟನೆ ನಡೆದಿದೆ.

- Advertisement -

ಅ.4ರಂದು ದೆಹಲಿಯ ಮನೆಯೊಂದರಲ್ಲಿ ಉತ್ತರ ಪ್ರದೇಶ ಮೂಲದ ನಿಷಾದ್ ಸಮುದಾಯದ 17ರ ಹರೆಯದ ಯುವತಿಯ ಮೃತದೇಹ ಪತ್ತೆಯಾಗಿದೆ. ಮನೆ ಕೆಲಸಕ್ಕಿದ್ದ ಆಕೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಹೇಳಿತ್ತಿದ್ದಾರೆ.

ಉತ್ತರ ಪ್ರದೇಶದ ಗೊಂಡಾ ಮೂಲದ ಮೃತ ಹುಡುಗಿಯು ತನ್ನ ಸಾವಿಗೂ ಕೆಲವೇ ಗಂಟೆಗಳ ಮುಂಚೆ ಚಿಕ್ಕಮ್ಮನಿಗೆ ಫೋನ್ ಮಾಡಿ, ಕಳೆದ ರಾತ್ರಿ ತನ್ನನ್ನು ಚಾಲಕನ ಕೋಣೆಯಲ್ಲಿ ಮಲಗಲು ತಿಳಿಸಿದ್ದಳೆನ್ನಲಾಗಿದೆ. ಸುಮಾರು 10 ವರ್ಷಗಳ ಹಿಂದೆ ಹುಡುಗಿಯ ತಾಯಿ ಮೃತಪಟ್ಟಿದ್ದು, ತಂದೆ ಮದ್ಯಪಾನಿಯಾಗಿ ಮೃತ ಹುಡುಗಿ ಸೇರಿದಂತೆ ಮೂವರು ಮಕ್ಕಳನ್ನು ತೊರೆದಿದ್ದನು. ಹೀಗಾಗಿ ಮೂರು ಮಕ್ಕಳನ್ನು ಅವರ ಸಂಬಂಧಿಕರೇ ದತ್ತು ಪಡೆದಿದ್ದರು. ಮೃತ ಹುಡುಗಿಯನ್ನು ಆಕೆಯ ಚಿಕ್ಕಮ್ಮ ದತ್ತು ಪಡೆದಿದ್ದರು.

- Advertisement -

ಮೃತ ಹುಡುಗಿಯ ಕುಟುಂಬ ದೆಹಲಿಗೆ ವಲಸೆ ಕಾರ್ಮಿಕರಾಗಿ ಬಂದಿತ್ತು. ಕೋವಿಡ್ ಲಾಕ್ ಡೌನ್ ವೇಳೆ ಸರಿಯಾದ ಕೆಲಸ ಸಿಕ್ಕಿರಲಿಲ್ಲ. ಇತ್ತೀಚೆಗೆ ಮೃತ ಹುಡುಗಿಯನ್ನು, ಮನೆಯೊಂದರಲ್ಲಿ ವೃದ್ಧ ತಾಯಿಯನ್ನು ನೋಡಿಕೊಳ್ಳುವ ಕೆಲಸಕ್ಕಾಗಿ ಸೆ.26ರಂದು ಮಹಿಳೆಯೊಬ್ಬರು ಕರೆದೊಯ್ದಿದ್ದರು. ಮನೆಯಲ್ಲಿ ವೃದ್ಧ ಮಹಿಳೆ, ಚಾಲಕ ಮಾತ್ರ ಇರುವುದು ಎಂದು ಆಕೆಯ ಚಿಕ್ಕಮ್ಮನಿಗೆ ತಿಳಿಸಲಾಗಿತ್ತು. ಹುಡುಗಿಯು ಮೃತಳಾಗುವುದಕ್ಕೆ ಮೂರು ದಿನ ಮೊದಲು ಆಕೆಯ ಸಂಪರ್ಕವೇ ಇರಲಿಲ್ಲ. ಮೃತಳಾದ ದಿನ ಮಧ್ಯಾಹ್ನ 3:14ಕ್ಕೆ ಹುಡುಗಿ ಮನೆಯ ಲ್ಯಾಂಡ್ ಲೈನ್ ನಿಂದ ಕರೆ ಮಾಡಿ, ಏನೋ ಆತಂಕದಲ್ಲಿದ್ದಂತಿತ್ತು. ಏನೋ ಹೇಳಲು ಬಯಸಿದ್ದಳು. ಆದರೆ, ಆಕೆಯ ಮನೆ ಯಜಮಾನರು ಮಧ್ಯಪ್ರವೇಶಿಸಿ ಮಾತನಾಡಿದಂತಿತ್ತು. ದೂರವಾಣಿ ಕರೆ ಸ್ಥಗಿತಗೊಂಡಿತ್ತು ಎಂದು ಮೃತ ಹುಡುಗಿಯ ಚಿಕ್ಕಮ್ಮ ಹೇಳುತ್ತಾರೆ. ನಂತರ ಮತ್ತೆ ಕರೆ ಮಾಡಿದ ಹುಡುಗಿ, ತನ್ನನ್ನು ಹಿಂದಿನ ರಾತ್ರಿ ಚಾಲಕನ ಕೋಣೆಯಲ್ಲಿ ಮಲಗಲು ಸೂಚಿಸಿದ್ದ ಬಗ್ಗೆ ಚಿಕ್ಕಮ್ಮನಲ್ಲಿ ಹೇಳಿಕೊಂಡಿದ್ದಳು. ಬಳಿಕ ಮತ್ತೊಮ್ಮೆ ಕರೆ ಸ್ಥಗಿತಗೊಂಡಿತ್ತು. ಆ ಬಳಿಕ, ಸಂಜೆ ಮನೆಯ ಯಜಮಾನರು ಕರೆ ಮಾಡಿ, ಹುಡುಗಿ ಕೋಣೆಯಲ್ಲಿ ಬಾಗಿಲು ಹಾಕಿಕೊಂಡಿರುವ ಬಗ್ಗೆ ತಿಳಿಸಿದ್ದರು. ಈ ಬಗ್ಗೆ ಆತಂಕಿತರಾದ ಚಿಕ್ಕಮ್ಮ ಮತ್ತು ಆಕೆಯ ಅತ್ತೆ, ಹುಡುಗಿ ಕೆಲಸಕ್ಕಿದ್ದ ಮನೆಗೆ ತೆರಳಿದ್ದರು. ಅಲ್ಲಿ ಆಕೆ ಸಾವಿಗೀಡಾಗಿರುವುದು ಗೊತ್ತಾಯಿತು. ಬಳಿಕ ಪೊಲೀಸ್ ಠಾಣೆಗೆ ತೆರಳಿ ರಾತ್ರಿ 2 ಗಂಟೆ ವರೆಗೂ ಕಾಯಿಸಲಾಯಿತು. ಮೃತ ದೇಹ ನೀಡಲು ಪೊಲೀಸರು ನಿರಾಕರಿಸಿದ್ದರು. ಆಕೆಯ ತಂದೆಯನ್ನು ಕರೆ ತರಲು ಸೂಚಿಸಲಾಗಿತ್ತು. ಆತನ ಸಂಪರ್ಕವೇ ಸಿಗಲಿಲ್ಲ. ಬಳಿಕ ಆಕೆಯ ಸಹೋದರಿಯನ್ನು ಕರೆಸಿ ವಿವರಗಳನ್ನು ನೀಡಲಾಯಿತು.
ಹುಡುಗಿಯ ಸಾವಿನ ಮೂರು ದಿನಗಳ ಬಳಿಕ ಆಕೆಯ ಚಿಕ್ಕಮ್ಮ ಮತ್ತು ಕುಟುಂಬಸ್ಥರು ಆಕೆ ಕೆಲಸಕ್ಕಿದ್ದ ಮನೆಗೆ ತೆರಳಿ ಪ್ರತಿಭಟನೆ ನಡೆಸಿದ್ದರು. ಕುಟುಂಬದ ಎಂಟು ಮಹಿಳೆಯರು ನಾಲ್ವರು ಪುರುಷರನ್ನು ಪೊಲೀಸರು ಈ ವೇಳೆ ವಶಕ್ಕೆ ಪಡೆದಿದ್ದರು. ಈ ವೇಳೆ ಪೊಲೀಸರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದರು ಮತ್ತು ಪುರುಷರಿಗೆ ಗಾಯಗಳಾಗುವಂತೆ ಥಳಿಸಿದ್ದರು ಎನ್ನಲಾಗಿದೆ. ಪೊಲೀಸರ ಏಟಿನಿಂದ ಓರ್ವನಿಗೆ ಉಸಿರಾಡಲು ಕಷ್ಟವಾಗಿತ್ತು.

ಹುಡುಗಿಯ ಹತ್ಯೆ ಮತ್ತು ಅತ್ಯಾಚಾರದ ಶಂಕೆ ಕುರಿತು ಎಫ್ ಐಆರ್ ಅಥವಾ ದೂರು ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ ಎಂದು ಮೃತ ಹುಡುಗಿಯ ಚಿಕ್ಕಮ್ಮ ಹೇಳಿದ್ದಾರೆ. ವಿಷಯಕ್ಕೆ ಸಂಬಂಧಿಸಿ ಅ.16ರಂದು ಘಟನೆ ನಡೆದ ಮಾಡೆಲ್ ಟೌನ್ ಪೊಲೀಸ್ ಠಾಣೆ ಮುಂಭಾಗದಲ್ಲಿ 45 ಜನ ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಘಟನೆಗೆ ಸಂಬಂಧಿಸಿ ಎಫ್ ಐಆರ್ ದಾಖಲಿಸಲು ಒತ್ತಾಯಿಸಿದ್ದರು. ಆದರೆ, ಪೊಲೀಸರು ಪ್ರತಿಭಟನಕಾರರ ಮೇಲೂ ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದ ಪ್ರತಿಭಟನೆಯ ವರದಿ ಮಾಡಲು ತೆರಳಿದ್ದ ‘ದ ಕ್ಯಾರವಾನ್’ ವರದಿಗಾರನ ಮೇಲೂ ಪೊಲೀಸರು ಹಲ್ಲೆ ನಡೆಸಿದ್ದಾರೆ. ತಾನು ಪತ್ರಕರ್ತನೆಂದು ತನ್ನ ಗುರುತು ಪತ್ರವನ್ನು ತೋರಿಸಿದರೂ, ಪೊಲೀಸ್ ಅಧಿಕಾರಿಯೊಬ್ಬರು ತನ್ನ ಮೇಲೆ ಹಲ್ಲೆ ನಡೆಸಿದರು. ತನ್ನ ಪೋನ್ ಕಿತ್ತುಕೊಂಡು ಪ್ರತಿಭಟನೆಯ ಫೋಟೊ ಮತ್ತು ವೀಡಿಯೊಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಪತ್ರಕರ್ತ ಅಹಾನ್ ಪೆಂಕರ್ ಆರೋಪಿಸಿದ್ದಾರೆ.



Join Whatsapp