ಲಖಿಂಪುರ ಹಿಂಸಾಚಾರದ ಆರೋಪಿಗಳನ್ನು 7 ದಿನಗಳಲ್ಲಿ ಬಂಧಿಸದಿದ್ದರೆ ಪ್ರಧಾನಿ ನಿವಾಸಕ್ಕೆ ಮುತ್ತಿಗೆ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್

Prasthutha|

ಲಕ್ನೋ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಆರೋಪಿಗಳನ್ನು 7 ದಿನಗಳಲ್ಲಿ ಬಂಧಿಸದಿದ್ದರೆ ತಾನು, ತನ್ನ ಬೆಂಬಲಿಗರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಆಝಾದ್ ಸಮಾಜ ಪಾರ್ಟಿ ಮುಖ್ಯಸ್ಥ, ದಲಿತ ನಾಯಕ ಚಂದ್ರಶೇಖರ್ ಆಝಾದ್ ಅವರು ಇಂದು ಎಚ್ಚರಿಸಿದ್ದಾರೆ.

- Advertisement -

ಈ ಸಂಬಂಧ ಪ್ರಧಾನ ಮಂತ್ರಿಗಳು ರೈತರೊಂದಿಗೆ ಮಾತನಾಡಬೇಕು ಮತ್ತು ಲಖಿಂಪುರ ಖೇರಿಗೆ ತೆರಳಿ ಮೃತಪಟ್ಟ ರೈತರ ಕುಟುಂಬದ ಸದಸ್ಯರನ್ನು ಭೇಟಿಯಾಗಲಿ ಎಂದು ಅವರು ಆಗ್ರಹಿಸಿದರು.

ಪ್ರತಿಯೊಂದು ವಿಷಯದಲ್ಲಿ ಟ್ವೀಟ್ ಮೂಲಕ ಪ್ರತಿಕ್ರಿಯಿಸುವ ಪ್ರಧಾನಿ ರೈತರ ಬಗ್ಗೆ ಮೌನ ವಹಿಸಿರುವುದು ದುರಂತ ಎಂದು ಆಝಾದ್ ತಿಳಿಸಿದರು. ಲಖಿಂಪುರ ಹಿಂಸಾಚಾರದ ದುಷ್ಕರ್ಮಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಆರೋಪಿಗಳನ್ನು ಏಳು ದಿನಗಳ ಒಳಗೆ ಬಂಧಿಸದಿದ್ದರೆ ನಾವು ಪ್ರಧಾನಿ ನಿವಾಸಕ್ಕೆ ಘೇರಾವ್ ಹಾಕುತ್ತೇವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

- Advertisement -

ಲಖಿಂಪುರ ಖೇರಿ ಹಿಂಸಾಚಾರ ಘಟನೆಯನ್ನು ಜಲಿಯನ್ ವಾಲ್ ಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ದಲಿತ ನಾಯಕ ಚಂದ್ರಶೇಖರ್ ಆಝಾದ್, ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಭಾರೀ ಪರಿಣಾಮ ಎದುರಿಸಬೇಕಾದಿತು ಎಂದು ಎಚ್ಚರಿಸಿದರು.

ಮಾತ್ರವಲ್ಲ ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಘಟನೆಯ ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ಸಲ್ಲಿಸಲಿ ಎಂದು ಅವರು ಒತ್ತಾಯಿಸಿದರು.

ಘಟನೆಗೆ ಸಂಬಂಧಿಸಿದಂತೆ ಆಶಿಶ್ ವಿರುದ್ಧ ಐಪಿಸಿ 302 ರ ಅಡಿಯಲ್ಲಿ ಟಿಕೊನಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದುವರೆಗೂ ಆರೋಪಿಯನ್ನು ಬಂಧಿಸದಿರುವುದು ದುರಂತ ಎಂದು ಅವರು ತಿಳಿಸಿದರು.



Join Whatsapp