ದೇಶದಲ್ಲಿರೋದು ನೀಚ ರಾವಣ ಸರ್ಕಾರ: ಡಿ.ಕೆ. ಶಿವಕುಮಾರ್ ಆಕ್ರೋಶ

Prasthutha|

ಬೆಂಗಳೂರು: ‘ದೇಶದಲ್ಲಿ ನೀಚ ರಾವಣ ಸರ್ಕಾರ ಅಧಿಕಾರ ನಡೆಸುತ್ತಿದ್ದು, ಅನ್ನದಾತರು ಹಾಗೂ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಉತ್ತರ ಪ್ರದೇಶದಲ್ಲಿ ಪ್ರತಿಭಟನೆನಿರತ ರೈತರ ಮೇಲೆ ಕಾರು ಹರಿಸಿ ಹತ್ಯೆ ಮಾಡಿರುವ ಘಟನೆಗೆ ನೈತಿಕ ಹೊಣೆಹೊತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮೃತ ರೈತರ ಕುಟುಂಬಕ್ಕೆ ಪರಿಹಾರ ನೀಡಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಧೃವನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಪ್ರದೇಶ ಕಾಂಗ್ರೆಸ್ ರೈತ ಘಟಕದ ಅಧ್ಯಕ್ಷ ಸಚಿನ್ ಮಿಗಾ ಅವರು ಉಪಸ್ಥಿತರಿದ್ದರು.

- Advertisement -

ಈ ವೇಳೆ ಶಿವಕುಮಾರ್ ಅವರು ಹೇಳಿದ್ದಿಷ್ಟು;

‘ಭಾರತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ನೋಡಿ ಜನ ಆತಂಕಪಡುತ್ತಿದ್ದಾರೆ. ದೇಶದಲ್ಲಿ ಅನ್ನದಾತನಿಗೆ ರಕ್ಷಣೆ ಇಲ್ಲವಾಗಿದೆ. ತನ್ನ ರಕ್ಷಣೆಗಾಗಿ ನಿರಂತರ ಹೋರಾಟ ಮಾಡುತ್ತಿರುವ ಅನ್ನದಾತರ ಮೇಲೆ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಬೆಂಗಾವಲು ಕಾರು ಹರಿಸಿ ನಾಲ್ವರು ರೈತರನ್ನು ಕಗ್ಗೊಲೆ ಮಾಡಲಾಗಿದೆ. ಈ ಘಟನೆಗೆ ನೈತಿಕ ಹೊಣೆ ಹೊತ್ತು ಸಚಿವ ಅಜಯ್ ಮಿಶ್ರಾ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರೈತರ ಹತ್ಯೆ ಮಾಡಿದವರ ವಿರುದ್ಧ ಐಪಿಸಿ ಸೆಕ್ಷನ್ 302 ಪ್ರಕಾರ ಕೊಲೆ ಮೊಕದ್ದಮೆ ದಾಖಲು ಮಾಡಿ, ಬಂಧಿಸಬೇಕು. ಮಿಶ್ರಾ ಅವರನ್ನೂ ಬಂಧಿಸಬೇಕು. ಹತ್ಯೆಗೊಳಗಾದ ರೈತರಿಗೆ ಪರಿಹಾರ ನೀಡಬೇಕು.

ಇದು ಬರೀ ನಾಲ್ವರು ರೈತರ ಕೊಲೆ ಮಾತ್ರವಲ್ಲ. ಇಡೀ ದೇಶದ ರೈತ ಸಮುದಾಯದ ಕೊಲೆ. ಪ್ರಜಾತಂತ್ರ ವ್ಯವಸ್ಥೆಯ ಕೊಲೆ. ಬಲಿಯಾದ ರೈತರ ಕುಟುಂಬ ಭೇಟಿ ಮಾಡಲು ಮುಂದಾದ ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿರುವುದು ಖಂಡನೀಯ. ಯಾವುದೇ ವಾರೆಂಟ್ ಇಲ್ಲದಿದ್ದರೂ ಉತ್ತರ ಪ್ರದೇಶ ಪೊಲೀಸರು ಅವರನ್ನು ತಡೆದಿದ್ದು, ಪುರುಷ ಪೊಲೀಸ್ ಅಧಿಕಾರಿಗಳು ಪ್ರಿಯಾಂಕಾ ಗಾಂಧಿ ಅವರ ಮೈ ಮೇಲೆ ಕೈ ಹಾಕಿ ಎಳೆದಾಡಿದ್ದಾರೆ. ಇದು ಇಡೀ ದೇಶದ ಮಹಿಳೆಯರಿಗೆ ಮಾಡಿದ ಅಪಮಾನ. ಈ ರೀತಿ ನಡೆದುಕೊಳ್ಳಲು ಯಾವ ಕಾನೂನಿನಲ್ಲಿ ಅವಕಾಶ ಇದೆ? ಅವರು ಯಾವ ಅಪರಾಧ ಮಾಡಿದ್ದರು? ಯಾಕಾಗಿ ಅವರನ್ನು ಬಂಧಿಸಿದ್ದಾರೆ? ಸತ್ತವರ ಕುಟುಂಬಕ್ಕೆ ಸಾಂತ್ವನ ಹೇಳುವುದು ಅಪರಾಧವೇ? ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಲು ಪೊಲೀಸರ ಬಳಿ ಯಾವ ವಾರೆಂಟ್ ಇತ್ತು?

ಸಾಂತ್ವನ ಹೇಳುವುದು ಭಾರತೀಯ ಸಂಸ್ಕೃತಿ. ಸಾಂತ್ವನ ಹೇಳಲು ಹೋದವರನ್ನೇ ಬಂಧಿಸುವುದು ಬಿಜೆಪಿಯ ಯಾವ ಸಂಸ್ಕೃತಿ? ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸತ್ತಿದೆ. ಸರ್ವಾಧಿಕಾರಿ, ಹಿಟ್ಲರ್ ಮನಸ್ಥಿತಿಯ ಸರ್ಕಾರದ ಕ್ರೌರ್ಯ ಮಿತಿ ಮೀರಿದೆ. ರಾಮ ರಾಜ್ಯ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದವರು ರಾವಣ ರಾಜ್ಯ ನಿರ್ಮಿಸಿದ್ದಾರೆ.

ಪ್ರಜಾತಂತ್ರ ವ್ಯವಸ್ಥೆ ಎಂದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯ, ಸಂವಾದದ ಹಕ್ಕು. ಮಾತುಕತೆ ಮೂಲಕ ಯಾವುದೇ ಸಮಸ್ಯೆ ಬಗೆಹರಿಸಬಹುದು. ಸ್ವಾತಂತ್ರ್ಯದ ಪ್ರತೀಕವೇ ಈ ಪ್ರಜಾತಂತ್ರ ವ್ಯವಸ್ಥೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪ್ರತಿಭಟನೆ ಸ್ವಾತಂತ್ರ್ಯ ಈ ದೇಶದ ಸಂವಿಧಾನ ನಮಗೆ ನೀಡಿರುವ ಹಕ್ಕು. ಇದನ್ನು ಬಿಜೆಪಿ ಸರ್ಕಾರ ಜನರಿಂದ ಕಸಿಯುತ್ತಿದೆ.

ಬ್ರಿಟೀಷರ ವಿರುದ್ಧ ಕಾಂಗ್ರೆಸ್ ಕೂಡ ಶಾಂತಿಯುತ ಪ್ರತಿಭಟನೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತ್ತು. ದೇಶದ ಅನ್ನದಾತ ಕಳೆದ 10 ತಿಂಗಳಿಂದ ಶಾಂತಿಯುತ ಪ್ರತಿಭಟನೆ ಮಾಡಿ, ತಮ್ಮ ಭವಿಷ್ಯಕ್ಕೆ ಮಾರಕವಾಗಿರುವ ಕೃಷಿ ಕರಾಳ ಕಾಯ್ದೆಗಳ ರದ್ಧತಿಗೆ ಆಗ್ರಹಿಸುತ್ತಿದ್ದಾರೆ. ಪ್ರತಿಭಟನಾ ನಿರತ ರೈತರನ್ನು ಕರೆದು ಮಾತನಾಡಿಸುವ ಕನಿಷ್ಠ ಸೌಜನ್ಯವೂ ಕೇಂದ್ರ ಸರ್ಕಾರಕ್ಕೆ ಇಲ್ಲ. ಬ್ರಿಟೀಷರು ಕೂಡ ಈ ರೀತಿ ನಡೆದುಕೊಂಡಿರಲಿಲ್ಲ. ಬಿಜೆಪಿ ಸರ್ಕಾರ ರೈತರನ್ನು ಮಾತುಕತೆಗೆ ಕರೆಯದೆ, ಹತ್ಯೆ ಮಾಡುವ ಮೂಲಕ ಬ್ರಿಟಿಷರನ್ನು ಮೀರಿಸುವ ಕ್ರೌರ್ಯ ಮೆರೆದಿದೆ. ದೇಶದಲ್ಲಿ ಶೇ. 70 ರಷ್ಟು ರೈತರಿದ್ದಾರೆ. ಸರ್ಕಾರ ಅವರ ಕಷ್ಟಗಳನ್ನು ಕೇಳದಿದ್ದ ಮೇಲೆ ಇನ್ಯಾರ ಸಮಸ್ಯೆ ಕೇಳುತ್ತದೆ?

ಈ ಮೂರು ರೈತ ವಿರೋಧಿ ಕಾಯ್ದೆಗಳಲ್ಲಿ ಗೊಂದಲ, ನ್ಯೂನ್ಯತೆಗಳಿವೆ ಎಂದು ಸುಪ್ರೀಂಕೋರ್ಟ್ ಕೂಡ ಅಭಿಪ್ರಾಯ ಪಟ್ಟಿದೆ. ಇದಾದ ನಂತರವಾದರೂ ಕೇಂದ್ರ ಸರ್ಕಾರ ರೈತರ ಜತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಬೇಕಿತ್ತು. ಈ ಮೂಲಕ ಬಿಜೆಪಿಯದ್ದು ಬ್ರಿಟೀಷರನ್ನು ಮೀರಿಸುವ ಸರ್ವಾಧಿಕಾರಿ ಮನಸ್ಥಿತಿ ಎಂಬುದು ಸಾಬೀತಾಗಿದೆ.

ದೇಶದ ಅನ್ನದಾತನ ಬೆಂಬಲಕ್ಕೆ ಕಾಂಗ್ರೆಸ್ ಪಕ್ಷ ನಿಲ್ಲಲಿದೆ. ಬಿಜೆಪಿಯ ಈ ದರ್ಪವನ್ನು ಕಾಂಗ್ರೆಸ್ ಖಂಡಿಸುತ್ತದೆ. ಕೇಂದ್ರ ಸರ್ಕಾರ ಇನ್ನಾದರೂ ಪ್ರಜಾಪ್ರಭುತ್ವ ವ್ಯವಸ್ಥೆ, ನ್ಯಾಯಾಂಗ, ಕಾನೂನು, ಸಂವಿಧಾನಕ್ಕೆ ಬೆಲೆ ಕೊಟ್ಟು, ತನ್ನ ಸರ್ವಾಧಿಕಾರ ಮನಸ್ಥಿತಿಯಿಂದ ಹೊರಬರಬೇಕು. ರೈತರ ಜತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಜನರೇ ಈ ಸರ್ಕಾರವನ್ನು ಕಿತ್ತೊಗೆದು ದೇಶದ ರೈತರು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಿಸಬೇಕು.

ನಾನು ನಮ್ಮ ನಾಯಕರಾದ ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಲ್ಲಿ ಮನವಿ ಮಾಡುತ್ತೇನೆ. ದೇಶದ ರೈತರು, ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡಲು ನೀವು ಧೈರ್ಯವಾಗಿ ಮುನ್ನುಗ್ಗಿ. ನಿಮ್ಮ ಜತೆ ಇಡೀ ದೇಶ ನಿಲ್ಲಲಿದೆ. ಪ್ರಿಯಾಂಕಾ ಗಾಂಧಿ ಅವರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಇತರ ನಾಯಕರ ಜತೆ ಚರ್ಚಿಸಿ ನಮ್ಮ ಮುಂದಿನ ನಡೆಯನ್ನು ತೀರ್ಮಾನಿಸುತ್ತೇವೆ. ಬಿಜೆಪಿ ವಿರುದ್ಧ ಈ ವಿಚಾರವಾಗಿ ಕಾನೂನು ಹೋರಾಟ ಮಾಡುವ ಅಗತ್ಯವಿಲ್ಲ. ಬೀದಿಗಿಳಿದು ಹೋರಾಟ ಮಾಡುತ್ತೇವೆ.’

ಮೇಕೆದಾಟು; ಸರ್ಕಾರಕ್ಕೆ ಒಂದು ತಿಂಗಳ ಗಡುವು:

ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಈ ಹಿಂದೆ ನೀರಾವರಿ ಸಚಿವರಾಗಿದ್ದವರು. ಅದಕ್ಕೆ ಸಂಬಂಧಿಸಿದ ಕಾನೂನು ಬಲ್ಲವರು. ಮೇಕೆದಾಟು ಯೋಜನೆಗೆ ಅಡ್ಡಿಪಡಿಸಲು ತಮಿಳುನಾಡಿಗೆ ಹಕ್ಕಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೇ ನಾವು ಕೂಡ ಇಷ್ಟುದಿನಗಳಿಂದ ಹೇಳುತ್ತಾ ಬಂದಿದ್ದೇವೆ. ನೀವು ಮುಖ್ಯಮಂತ್ರಿಗಳಾದಾಗಿನಿಂದ ಈ ನಿಟ್ಟಿನಲ್ಲಿ ಯಾವುದೇ ಕೈಗೊಂಡಿಲ್ಲ, ಯಾಕೆ? ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿರುವ ನೀವು ಕೃಷ್ಣ, ಮಹದಾಯಿ ಯೋಜನೆ ಕಾರ್ಯಾರಂಭ ಮಾಡಲು ಸಾಧ್ಯವಾಗುತ್ತಿಲ್ಲ, ಯಾಕೆ?

ಕೃಷ್ಣ ವಿಚಾರದಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನ ನೀರು, ಜಮೀನು, ಹಣ ಯಾವುದೂ ಬೇಕಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಇದೆ. ಕಾನೂನು ವ್ಯಾಪ್ತಿಯಲ್ಲಿ ಕೆಲಸ ಆರಂಭಿಸಬೇಡಿ ಎಂದು ನಾವ್ಯಾರೂ ಹೇಳಿಲ್ಲ. ಈ ಯೋಜನೆಗೆ ಬೇಕಾದ ಎಲ್ಲ ಅನುಮತಿ ತೆಗೆದುಕೊಂಡು, ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತಿಲ್ಲ ಯಾಕೆ? ಸದ್ಯ ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ನೀರಾವರಿ ವಿಚಾರಗಳು ಹಾಗೂ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಮೇಕೆದಾಟು ಯೋಜನೆಗಳ ಕಾಮಗಾರಿ ಆರಂಭಿಸಲು ಬೇಕಾದ ಕಾರ್ಯಕ್ರಮ ರೂಪಿಸಲು ಸರ್ಕಾರಕ್ಕೆ 1 ತಿಂಗಳ ಗಡುವು ನೀಡುತ್ತೇವೆ. ಅಷ್ಟರಲ್ಲಿ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಿ.

ಸರ್ಕಾರ ನೀರಾವರಿ ಹಾಗೂ ಕುಡಿಯುವ ನೀರಿನ ವಿಚಾರದಲ್ಲಿ ವಿಳಂಬ ನೀತಿ ನಿಲ್ಲಿಸಿ, ಯೋಜನೆಗಳ ಕಾಮಗಾರಿ ಆರಂಭಿಸದಿದ್ದರೆ ನಾವು ಮುಂದಿನ ಹೋರಾಟ ನಡೆಸುತ್ತೇವೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಯಾವ ರೀತಿ ಇರಲಿದೆ ಎಂದು ಮುಂದೆ ತಿಳಿಸುತ್ತೇವೆ.

ಇತ್ತೀಚೆಗೆ ಪ್ರತಿಭಟನೆಗೆ ಮುಂದಾದ ರೈತರನ್ನು ಮಾರ್ಗಮಧ್ಯದಲ್ಲೇ ತಡೆಹಿಡಿಯಲಾಗಿದೆ. ಅವರನ್ನು ತಡೆ ಹಿಡಿದಿದ್ದು ಏಕೆ? ಅವರು ಯಾವ ಅಪರಾಧ ಮಾಡಿದ್ದರು? ಪ್ರತಿಭಟನೆ ಮಾಡುವುದಾಗಿ ಮುಂಚಿತವಾಗಿ ಮಾಹಿತಿ ನೀಡಿದ್ದರೂ ಅವರನ್ನು ತಡೆದು, ಅವರ ಧ್ವನಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ. ಈ ವಿಚಾರವಾಗಿಯೂ ನಮ್ಮ ಮುಂದಿನ ಹೆಜ್ಜೆ ಬಗ್ಗೆ ಚರ್ಚಿಸುತ್ತೇವೆ.

ಸರ್ಕಾರವೇ ಇಲ್ಲದ ಪರಿಸ್ಥಿತಿ:

ರಾಜಧಾನಿಯಲ್ಲಿ ಧಾರಾಕಾರ ಮಳೆ ಬಿದ್ದು ಮನೆಗಳಿಗೆ ನೀರು ನುಗ್ಗಿದ್ದರೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರಿಗೂ ಹೊಣೆಗಾರಿಕೆ ಇಲ್ಲವಾಗಿದೆ. ಹೇಳುವವರು, ಕೇಳುವವರು ಇಲ್ಲವಾಗಿದ್ದಾರೆ. ನಿನ್ನೆ ಸರ್ಕಾರದ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮದಂತೆ ಮಾಡಿದ್ದಾರೆ. ರಾಜ್ಯಕ್ಕೆ ಸಂಬಂಧಪಡದ ಜೆ.ಪಿ ನಡ್ಡಾ ಅವರ ಫೋಟೋ ಹಾಕಿಕೊಂಡು ಕಾರ್ಯಕ್ರಮ ಮಾಡಿದ್ದು, ರಾಜ್ಯದಲ್ಲಿರುವ ಮುಖ್ಯಕಾರ್ಯದರ್ಶಿ, ಅಧಿಕಾರಿಗಳು, ಆಯುಕ್ತರಿಗೆ ಸಾಮಾನ್ಯ ಪರಿಜ್ಞಾನವೇ ಇಲ್ಲದಂತಾಗಿದೆ. ಇದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಇದರ ವಿರುದ್ಧವೂ ನಾವು ಧ್ವನಿ ಎತ್ತುತ್ತೇವೆ’ ಎಂದರು.



Join Whatsapp