ಮಂಗಳೂರು: ಕದ್ದ ಮೊಬೈಲ್ ಹಿಂತಿರುಗಿಸಲು ಹಣಕ್ಕೆ ಬೇಡಿಕೆಯಿಟ್ಟವನ ಕೊಲೆ | ಆರೋಪಿ ಪೊಲೀಸ್ ಬಲೆಗೆ

Prasthutha|

ಮಂಗಳೂರು: ಕದ್ದ‌ ಮೊಬೈಲ್​ ಅನ್ನು ವಾಪಸ್​ ನೀಡಲು 500 ರೂಪಾಯಿ ಬೇಡಿಕೆಯನ್ನಿಡುತ್ತಿದ್ದಾನೆಂಬ ಕಾರಣಕ್ಕೆ ಕೊಲೆ ಮಾಡಿ ಪರಾರಿಯಾದ ಆರೋಪಿಯನ್ನು ಮಂಗಳೂರಿನ ರೈಲ್ವೆ ‌ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಬಂದರು ರೈಲ್ವೆ ಗೂಡ್ಸ್ ಶೆಡ್ ಯಾರ್ಡ್‌ನಲ್ಲಿ 2021 ಫೆ.18ರಂದು ಅಸ್ಸಾಮಿನ ಮೈನುಲ್ ಹಕ್ ಬಾರ್ಬುಯ್ಯಾ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ರೈಲ್ವೆ ಪೊಲೀಸರು ಒಡಿಶಾ ಮೂಲದ ಪ್ರದೀಪ್ ಲಕಾರ ಎಂಬಾತನನ್ನು ಬಂಧಿಸಿದ್ದಾರೆ.

- Advertisement -


ಕೊಲೆಯಾದ ಮೈನುಲ್ ಹಕ್ ಸುಮಾರು ಹತ್ತು ವರ್ಷಗಳಿಂದ ಮಂಗಳೂರು ಬಂದರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ಈತ ಕುಡಿತದ ಚಟ ಹೊಂದಿದ್ದ ಗೆಳೆಯರೊಂದಿಗೆ ಸೇರಿ ಜಗಳ ಮಾಡುತ್ತಿದ್ದ. ಆಗಸ್ಟ್‌ನಲ್ಲಿ ಆರೋಪಿ ಪ್ರದೀಪ್ ಲಕಾರ ಮದ್ಯ ಸೇವನೆ ಮಾಡಿ ಮಲಗಿದ್ದಾಗ ಆತನ ಮೊಬೈಲ್ ಫೋನ್ ಅನ್ನು ಮೈನುಲ್ ಹಕ್ ಕದ್ದಿದ್ದ.


ಕದ್ದ ಮೊಬೈಲ್​ ಅನ್ನು ವಾಪಸ್ ನೀಡಬೇಕಾದರೆ ₹ 500 ನೀಡಬೇಕೆಂದು ಹೇಳಿ ಜಗಳ ಮಾಡುತ್ತಿದ್ದ. ಇದರಿಂದ ‌ಕೋಪಗೊಂಡ ಪ್ರದೀಪ್ ಮೈನುಲ್ ಹಕ್‌ನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಯ ಪತ್ತೆಗೆ ರೈಲ್ವೆ ಪೊಲೀಸ್ ಅಧೀಕ್ಷಕಿ ಸಿರಿ ಗೌರಿ, ಪೊಲೀಸ್ ಉಪಾಧೀಕ್ಷಕ ಡಿ.ಅಶೋಕ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಮಂಗಳೂರು ರೈಲ್ವೆ ಪೊಲೀಸ್ ಠಾಣೆಯ ನಿರೀಕ್ಷಕ ಮೋಹನ್ ಕೊಟ್ಟಾರಿ ನೇತೃತ್ವದ ತಂಡ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.



Join Whatsapp