ವಿಜಯಪುರ: 2014 ಮೇ 26 ರಂದು ವಿಜಯಪುರ ಪಟ್ಟಣದಲ್ಲಿ ನಡೆದಿದ್ದ ಗಲಭೆ ಪ್ರಕಾರಣದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ 134 ಜನರನ್ನು ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯ ಖುಲಾಸೆ ಗೊಳಿಸಿದೆ.
ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ವಿಜಯೋತ್ಸವದ ವೇಳೆ ನಡೆದ ಗಲಾಟೆ ಕೋಮು ಗಲಭೆಯಾಗಿ ತಿರುಗಿತ್ತು. ಗಲಭೆ ವೇಳೆ ಎರಡು ಕೋಮುಗಳ ಮಧ್ಯೆ ಕಲ್ಲು ತೂರಾಟ ನಡೆದು, ಬೈಕ್ ಹಾಗೂ ಇತರೆ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.ಘಟನೆ ಕುರಿತು ನಗರದ ಗಾಂಧಿಚೌಕ್ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿದ್ದರು. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸೇರಿದಂತೆ ಎರಡು ಕೋಮಿನ 134 ಜನರ ಮೇಲೆ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಸುದೀರ್ಘ ಏಳು ವರ್ಷಗಳ ಕಾಲ ವಿಚಾರಣೆ ನಡೆಸಿದ್ದು, ಇಂದು ತೀರ್ಪು ಹೊರಬಿದ್ದಿದೆ. ಕೋವಿಡ್ ಕಾರಣದಿಂದಾಗಿ ಬುಧವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಲಾಯಿತು.