ಚಿಕ್ಕಮಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ: ಐವರ ವಿರುದ್ಧ ಪ್ರಕರಣ ದಾಖಲು

Prasthutha|

ಚಿಕ್ಕಮಗಳೂರು: ಮಂಗಳೂರಿನ ಸುರತ್ಕಲ್ ಬಳಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳನ್ನು ಸಂಘಪರಿವಾರದ ಕಾರ್ಯಕರ್ತರು ತಡೆದು ಹಲ್ಲೆ ನಡೆಸಿದ ಘಟನೆಯ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆಯಲ್ಲೂ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿದೆ.

- Advertisement -

ಚಿಕ್ಕಮಗಳೂರಿಗೆ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳನ್ನು ತಡೆದು ಹಲ್ಲೆ ಮಾಡಿದ ನೈತಿಕ ಪೊಲೀಸ್ ಗಿರಿ ಅರೋಪದ ಮೇಲೆ ಐವರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು ಟೌನ್ ಗೌರಿಕಾಲುವೆ ನಿವಾಸಿ ಗುರುಕಿರಣ್, ಕಿಶೋರ್ , ತ್ಯಾಗರಾಜ್, ಶ್ಯಾಮ್ ಹಾಗೂ ಸಂತೋಷ್ ಕೋಟ್ಯಾನ್ ಮತ್ತು ಇತರರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

- Advertisement -

ಇತ್ತೀಚೆಗೆ ಇಲ್ಲಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಹಿರೇಕೊಳಲೆ ಕಡೆಗೆ ತೆರಳಿ ಅಲ್ಲಿಂದ ಮುಳ್ಳಯ್ಯನಗಿರಿಯತ್ತ ಪ್ರಯಾಣ ಬೆಳೆಸುತ್ತಿದ್ದ ಸಂದರ್ಭದಲ್ಲಿ ವಾಹನವನ್ನು ತಡೆದು ಈ ಗುಂಪು ಹಲ್ಲೆ ನಡೆಸಿದೆ. ವಾಹನದಲ್ಲಿ ಅನ್ಯಕೋಮಿನ ವಿದ್ಯಾರ್ಥಿಗಳ ಜೊತೆ ಕೆಲ ಯುವತಿಯರು ಇರುವುದನ್ನು ಗಮನಿಸಿ ಈ ಗುಂಪು ಪುಂಡಾಟ ಮೆರೆದಿದೆ ಎನ್ನಲಾಗಿದೆ.

ತಮ್ಮ ಸ್ವಂತ ಸಹೋದರನ ವಾಹನದಲ್ಲಿ ಪ್ರವಾಸ ಹೋಗುತ್ತಿರುವುದಾಗಿ ಸಮಜಾಯಿಷಿ ನೀಡಿದರೂ ಕೇಳದ ಯುವಕರ ಗುಂಪು ಹಲ್ಲೆ ನಡೆಸಿದೆ. ವಿದ್ಯಾರ್ಥಿಯೊಬ್ಬ ನೀಡಿದ ದೂರಿನ ಹಿನ್ನೆಲೆಯಲ್ಲಿ ಸಂತೋಷ್ ಕೋಟ್ಯಾನ್ ಇತರ ಜವರ ಮೇಲೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಘಟನೆಯ ವಿವರ:
23-09-2021 ರಂದು ಬೆಳಿಗ್ಗೆ 8-30 ಗಂಟೆಗೆ ವಾಹನವೊಂದರಲ್ಲಿ ಟಿ.ಎಂ.ಎಸ್ ಕಾಲೇಜಿನ ವಿದ್ಯಾರ್ಥಿಗಳು ಚಿಕ್ಕಮಗಳೂರಿನಿಂದ ಹೊರಟು ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಬಾಬಾಬುಡನ್ ಗಿರಿ ಹೊನ್ನಮ್ಮನ ಹಳ್ಳ ಫಾಲ್ಸ್ ಗೆ ಹೋಗಿದ್ದಾರೆ. ಅಲ್ಲಿಂದ ಚಿಕ್ಕಮಗಳೂರಿಗೆ ಬರಲು ಬ್ಯಾಗದಹಳ್ಳಿ ಗ್ರಾಮದ ರಸ್ತೆಯಿಂದ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಬ್ಯಾಗದಹಳ್ಳಿ ಕ್ರಾಸ್ ಹತ್ತಿರ ಚಿಕ್ಕಮಗಳೂರು ಕಡೆಗೆ ಬರಲು ಚಾಲಕನು ವಾಹನವನ್ನು ತಿರುಗಿಸಿದ್ದಾನೆ. ಅದೇ ಸಮಯದಲ್ಲಿ ಸ್ಕೂಟಿಯೊಂದರಲ್ಲಿ ಬಂದ ಇಬ್ಬರು ಟಿ.ಟಿ ವಾಹನಕ್ಕೆ ಅಡ್ಡ ಹಾಕಿ ಚಾಲಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

ಆಗ ಸ್ಕೂಟಿಯಲ್ಲಿ ಬಂದವರಲ್ಲಿ ಗುರುಕಿರಣ್ ಎಂಬಾತ ಯಾರಿಗೋ ಫೋನ್ ಮಾಡಿ ಸ್ಥಳಕ್ಕೆ ಸುಮಾರು 15 ರಿಂದ 20 ಜನರನ್ನು ಕರೆಸಿದ್ದು ಅಲ್ಲಿಗೆ ಬಂದ ಗುಂಪು ಕಟ್ಟಿಕೊಂಡು ವಾಹನದೊಳಗೆ ಹತ್ತಿ ವಿದ್ಯಾರ್ಥಿಗಳಿಗೆ ಅವಾಚ್ಯವಾಗಿ ಬೈಯುತ್ತಾ ಕೆಲವು ವಿದ್ಯಾರ್ಥಿಗಳಿಗೆ ಕೈಗಳಿಂದ ಹಲ್ಲೆ ನಡೆಸಿದೆ. ಕೆಲವು ಮುಸ್ಲಿಮ್ ವಿದ್ಯಾರ್ಥಿಗಳನ್ನು ವಾಹನದಿಂದ ಕೆಳಗೆ ಇಳಿಸಿಕೊಂಡು ಮನ ಬಂದಂತೆ ಕೈಗಳಿಂದ ಮತ್ತು ಹೆಲ್ಮೆಟ್ ನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರವ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.



Join Whatsapp