ಮಂಗಳೂರು: ವಿಹಾರಕ್ಕೆಂದು ತೆರಳಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನು ಸಂಘಪರಿವಾರದ ಕಾರ್ಯಕರ್ತರು ತಡೆದು ದಾಂಧಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿಯವರೇ, ಮಂಗಳೂರಿನಲ್ಲಿ ಇರುವುದು ಬಿಜೆಪಿ ಸರ್ಕಾರನಾ? ತಾಲಿಬಾನ್ ಗಳದ್ದಾ ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ಬಳಿ ಭಾನುವಾರ ಸಂಜೆ ಘಟನೆ ಮಲ್ಪೆ ಬೀಚ್ ಗೆ ವಿಹಾರಕ್ಕೆಂದು ವೈದ್ಯಕೀಯ ವಿದ್ಯಾರ್ಥಿಗಳಿಬ್ಬರು ಜೊತೆಯಾಗಿ ಪ್ರಯಾಣಿಸುತ್ತಿದ್ದ ಕಾರನ್ನು ತಡೆದ ಸಂಘಪರಿವಾರದ ಕಾರ್ಯಕರ್ತರು ದಾಂಧಲೆ ನಡೆಸಿದ್ದರು. ಈ ಕುರಿತ ವಿಡೀಯೋ ವೈರಲ್ ಆಗಿದ್ದು, ಅನೈತಿಕ ಪೊಲೀಸ್ ಗಿರಿಯ ವಿರುದ್ಧ ಜಿಲ್ಲಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಟ್ರಾಫಿಕ್ ಇನ್ಸ್ ಪೆಕ್ಟರ್ ಸಮ್ಮುಖದಲ್ಲೇ ದಾಂಧಲೆ ನಡೆಸಿದ ಕಾರ್ಯಕರ್ತರು, ತೆಡೆಯಲೆತ್ನಿಸಿದ ಪೊಲೀಸ್ ಮಾತಿಗೂ ಕ್ಯಾರೇ ಎನ್ನದೇ ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಮುಂದಾಗಿರುವ ಘಟನಾ ದೃಶ್ಯಗಳು ವೈರಲ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.