ತಿರುವನಂತಪುರಂ: ಇತ್ತೀಚೆಗೆ ನಡೆದ ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಪಕ್ಷದ ಪೊಲಿಟಿಕಲ್ ಅಫೈರ್ಸ್ ಕಮಿಟಿ(ಪಿಎಸಿ) ಹುದ್ದೆಗೆ ರಾಜೀನಾಮೆ ನೀಡಿದ್ದ ವಿ. ಎಂ. ಸುಧೀರನ್ ಅವರು ಇಂದು ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ (ಎ.ಐ.ಸಿ.ಸಿ) ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯು.ಡಿ.ಎಫ್ ಅನುಭವಿಸಿದ ಹೀನಾಯ ಸೋಲಿನ ನಂತರ ಪಕ್ಷ ಸಂಘಟನೆಯಲ್ಲಿ ವಿಫಲತೆಯ ನೆಪದಲ್ಲಿ ಆಂತರಿಕ ಕಚ್ಚಾಟದಿಂದಾಗಿ ಕೇರಳ ಕಾಂಗ್ರೆಸ್ ಇಬ್ಭಾಗವಾಗಿತ್ತು.
ದೀರ್ಘಕಾಲದಿಂದ ಕೇರಳದ ಗುಂಪುಗಾರಿಕೆ ಮತ್ತು ರಾಜಕೀಯದಿಂದ ದೂರವಿದ್ದ ಸುಧೀರನ್ ಅವರ ಹಠಾತ್ ರಾಜೀನಾಮೆ ನಿರ್ಧಾರಕ್ಕೆ ಸಂಬಂಧಿಸಿದಂತೆ ಅವರು ಮಾಧ್ಯಮಕ್ಕೆ ಇನ್ನೂ ಪ್ರತಿಕ್ರಿಯಿಸಿಲ್ಲ.
ಸುಧೀರನ್ ಅವರು ಪಕ್ಷದ ಹುದ್ದೆಗೆ ರಾಜೀನಾಮೆ ನೀಡುವ ಮುನ್ನ ರಾಜ್ಯದಲ್ಲಿ ಪಕ್ಷ ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿದ ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ತಾರೀಖ್ ಅನ್ವರ್ ಅವರು ಈ ಸಂಬಂಧ ಕೇರಳ ಕಾಂಗ್ರೆಸ್ ನಾಯಕರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದರು. ಈ ಮಧ್ಯೆ ಇಂದು ಸುಧೀರನ್ ಎ.ಐ.ಸಿ.ಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ರಾಜಕೀಯ ವಿದ್ಯಮಾನದಲ್ಲಿ ಕೇರಳ ಕಾಂಗ್ರೆಸ್ ನ ಇಬ್ಬರು ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿ ಪಕ್ಷವನ್ನು ತೊರೆದು ಆಡಳಿತಾರೂಢ ಸಿ.ಪಿ.ಐ (ಎಂ) ಸೇರ್ಪಡೆಗೊಂಡಿರುವುದು ಗಮನಾರ್ಹ.