► ಅನ್ನಾಹಾರ ನೀಡದೆ ನಿರ್ಲಕ್ಷ್ಯ ತೋರಿದ ಸಿಬ್ಬಂದಿ
ಮಂಗಳೂರು: ದುಬೈ ಹಾಗೂ ದಮಾಮ್ ನಿಂದ ಮಂಗಳೂರಿಗೆ ಬರಬೇಕಿದ್ದ ಎರಡು ವಿಮಾನಗಳು ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯದೆ ನೇರವಾಗಿ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಇಳಿದ ಘಟನೆ ಶನಿವಾರ ನಡೆದಿದ್ದು, ಈ ಎರಡೂ ವಿಮಾನಗಳಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ವ್ಯವಸ್ಥೆ ಮಾಡದೆ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ದಮಾಮ್ ನಿಂದ 150ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಹೊರಟಿದ್ದ ವಿಮಾನ ಶನಿವಾರ ಬೆಳಗ್ಗಿನ ಜಾವ 4.30ಕ್ಕೆ ಮಂಗಳೂರಿಗೆ ತಲುಪಬೇಕಿತ್ತು. ಆದರೆ ಈ ಪ್ರದೇಶದಲ್ಲಿ ಮಂಜು ಆವರಿಸಿದೆ ಎಂಬ ಕಾರಣ ನೀಡಿ ನೇರವಾಗಿ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ. ಅದೇ ರೀತಿ ದುಬೈಯಿಂದ ಹೊರಟಿದ್ದ ವಿಮಾನ ಕೂಡ ಕಲ್ಲಿಕೋಟೆ ನಿಲ್ದಾಣದಲ್ಲೇ ಇಳಿಸಲಾಗಿದೆ.
ಆದರೆ ಈ ವಿಮಾನಗಳಲ್ಲಿದ್ದ ಪ್ರಯಾಣಿಕರಿಗೆ ಸರಿಯಾದ ಮಾಹಿತಿ ನೀಡದ ಸಿಬ್ಬಂದಿ ಅವರೊಂದಿಗೆ ಕಠೋರವಾಗಿ ವರ್ತಿಸಿದ್ದಾರೆ. ಆಹಾರ, ನೀರು ನೀಡದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ವಿಮಾನದ ಎ.ಸಿ.ವ್ಯವಸ್ಥೆಯನ್ನು ಬಂದ್ ಮಾಡಿದ್ದರಿಂದ ಪ್ರಯಾಣಿಕರು ಅಸ್ವಸ್ಥಗೊಂಡರೂ ಯಾರು ಕೂಡ ಕೇಳುವವರಿಲ್ಲದೆ ಪರದಾಡುವಂತಾಗಿದೆ ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನು ಹೊರಗಡೆ ಪ್ರಯಾಣಿಕರಿಗಾಗಿ ಕಾಯುತ್ತಿದ್ದ ಕುಟುಂಬದವರ ಅವ್ಯವಸ್ಥೆಯಂತೂ ಹೇಳತೀರದಾಗಿದೆ. ವಿಮಾನ ಬಂದಿದೆಯೇ, ತಮ್ಮ ಸಂಬಂಧಿಕರು ಆಗಮಿಸಿದ್ದಾರೆಯೇ ಎಂಬ ಮಾಹಿತಿ ಇಲ್ಲದೆ ಅವರು ಅಲೆದಾಡುವಂತಾಗಿದೆ. ನಿಲ್ದಾಣದ ಯಾವ ಅಧಿಕಾರಿಯೂ ಸರಿಯಾಗಿ ಸ್ಪಂದಿಸದೆ ನಿರ್ಲಕ್ಷ್ಯ ತೋರಿರುವ ಆರೋಪ ಕೇಳಿಬಂದಿದೆ.