IPL 2021; ಕ್ಯಾಪ್ಟನ್ ಕೂಲ್ ವರ್ಸಸ್ ಕಿಂಗ್ ಕೊಹ್ಲಿ..!

Prasthutha|

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಹೈ ವೋಲ್ಟೇಜ್ ಪಂದ್ಯದಲ್ಲಿ ಶುಕ್ರವಾರ  ಶಾರ್ಜಾದಲ್ಲಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.

- Advertisement -

14ನೇ ಆವೃತ್ತಿಯ ದ್ವಿತೀಯಾರ್ಧದಲ್ಲಿ ಎರಡೂ ತಂಡಗಳು ತಲಾ ಒಂದು ಪಂದ್ಯವಾಡಿದ್ದು,   ಮುಂಬೈ ವಿರುದ್ಧ  ಮೊದಲ ಪಂದ್ಯದಲ್ಲಿ ಚೆನ್ನೈ ಗೆಲುವು ಸಾಧಿಸಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಕೆಆರ್ ವಿರುದ್ದ ಯಾವುದೇ ಚಾಲೆಂಜ್’ಗೂ ಮನಸ್ಸು ಮಾಡದೆ ಮಾಡದೆ ಹೀನಾಯವಾಗಿ ಸೋಲನುಭವಿಸಿತ್ತು.

‘ದಕ್ಷಿಣ ಡರ್ಬಿ’ ಎಂದೇ ಖ್ಯಾತಿ ಪಡೆದಿರುವ ಈ ಪಂದ್ಯದಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಹಾಗೂ ಕಿಂಗ್ ಕೊಹ್ಲಿ ನಾಯಕತ್ವದ ಕಾರಣದಿಂದಾಗ ಅಭಿಮಾನಿಗಳ ಪಾಲಿಗೆ ರೋಚಕತೆ ಪಡೆದಿದೆ.

- Advertisement -

ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಚೆನ್ನೈ ಪ್ಲೇ-ಆಫ್ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಮತ್ತೊಂದೆಡೆ ಮೂರನೇ ಸ್ಥಾನದಲ್ಲಿರುವ ಬೆಂಗಳೂರಿಗೆ ಈ ಪಂದ್ಯವು ಮಹತ್ವದ್ದಾಗಿದೆ.

 ಹೈ ವೋಲ್ಟೇಜ್ ಪಂದ್ಯಕ್ಕೆ ಮುನ್ನವೇ ಸಿಎಸ್ ಕೆ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಪ್ರಮುಖ ಆಟಗಾರ ಅಂಬಟಿ ರಾಯುಡು ಗಾಯಗೊಂಡಿದ್ದು, ಹೀಗಾಗಿ  ಇಂದಿನ ಪಂದ್ಯದಲ್ಲಿ ಆಡುವುದು ಬಹುತೇಕ ಅನುಮಾನ ಎನ್ನಲಾಗಿದೆ. ಒಂದು ವೇಳೆ ರಾಯುಡು ಫಿಟ್ ಆಗದಿದ್ದಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ಸಿಎಸ್’ಕೆಯ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಮತ್ತೊಂದೆಡೆ, ಐಪಿಎಲ್‌ನಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಸಿಎಸ್‌ಕೆ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನಡುವಣ ಕೊನೆಯ ಹಣಾಹಣಿ ಇದಾಗಿರಲಿದೆ ಎಂಬ ಸುದ್ದಿಯೂ ವೈರಲ್ ಆಗಿದೆ.

ಪ್ರಸಕ್ತ ಸಾಲಿನ ಐಪಿಎಲ್ ಬಳಿಕ ಆರ್‌ಸಿಬಿ ನಾಯಕ ಸ್ಥಾನ ತೊರೆಯುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ. ಅತ್ತ 40 ವರ್ಷದ ಧೋನಿ, ಮುಂದಿನ ವರ್ಷ ಐಪಿಎಲ್’ನಲ್ಲಿ ಆಡುವರೇ ಎಂಬುದು ಸ್ಪಷ್ಟತೆಯಿಲ್ಲ.

ಇದುವರೆಗೆ ಎಂಟು ಪಂದ್ಯವಾಡಿರುವ ಸಿಎಸ್ ಕೆ ಆರು ಪಂದ್ಯಗಳನ್ನು ಗೆದ್ದು 12 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದರೆ ಆರ್ ಸಿಬಿ ತಂಡ ಐದು ಪಂದ್ಯಗಳನ್ನು ಗೆದ್ದು 10 ಅಂಕ ಸಂಪಾದಿಸಿದ್ದು, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.



Join Whatsapp