ವಿಶ್ವಸಂಸ್ಥೆ : ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಸಂಬಂಧ ಪಟ್ಟ ಉಭಯ ದೇಶಗಳು ಮಾತುಕತೆಗಳ ಮೂಲಕ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಬೆಕು ಎಂದು ಎರ್ದೋಗಾನ್ ಒತ್ತಾಯಿಸಿದ್ದಾರೆ.
ಅಲ್ಲದೇ ಎರಡು ದೇಶಗಳ ಸಮಸ್ಯೆ ಬಗೆಹರಿಯಬೇಕೆಂಬ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ, ಸುಮಾರು 74 ವರ್ಷಗಳ ಈ ಸಮಸ್ಯೆಯು ವಿಶ್ವಸಂಸ್ಥೆಯ ನಿರ್ಣಯದ ಚೌಕಟ್ಟಿನೊಳಗೆ ಪರಿಹಾರ ಕಂಡುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.
ಇನ್ನು ಟರ್ಕಿ ಕಾಶ್ಮೀರ ವಿಷಯವನ್ನು ಕಳೆದ ಅಧಿವೇಶನದಲ್ಲೂ ಪ್ರಸ್ತಾಪಿಸಿತ್ತು, ಸಮಸ್ಯೆ ಬಗೆಹರಿಸುವಂತೆಯೂ ಕೇಳಿಕೊಂಡಿತ್ತು. ಈ ವಿಚಾರಕ್ಕೆ ಇನ್ನಿತರ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸುವುದನ್ನು ಟರ್ಕಿಯು ಕಲಿಯಬೇಕೆಂದು ಭಾರತ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿತ್ತು.